ಕಲಬುರಗಿ- ಪೊಲೀಸ್ ಸಬ್- ಇನ್ಸ್ ಪೆಕ್ಟರ್(PSI) ನೇಮಕಾತಿ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮದ ತನಿಖೆಯನ್ನು ಮುಂದುವರೆಸಿರುವ ಸಿಐಡಿ ಪೊಲೀಸರು ಈಗಾಗಲೇ ಈ ಪ್ರಕರಣ ಸಂಬಂಧ ಟಾಪ್ 50 ಅಭ್ಯರ್ಥಿಗಳಿಗೆ ನೋಟಿಸ್ ನೀಡಿದ್ದಾರೆ. ಇದರ ಬೆನ್ನಲ್ಲೇ ಪ್ರಕರಣದ ಪ್ರಮುಖ ಆರೋಪಿ ಕಲಬುರಗಿ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮಾಲೀಕರಾಗಿರುವ ಬಿಜೆಪಿಯ ಮುಖಂಡೆ ದಿವ್ಯಾ ಹಾಗರಗಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಅಲ್ಲದೆ, ಈ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಹಾಗೂ ಸಹ ಶಿಕ್ಷಕಿ ಅರ್ಚನಾ ಎಂಬುವರೂ ಕೂಡಾ ಇಲ್ಲಿನ ಜೆಎಫ್ಎಂಎ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದಾರೆ. ಜ್ಞಾನಜ್ಯೋತಿ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಅಕ್ರಮದ ತನಿಖೆ ನಡೆಸುತ್ತಿರುವ ಸಿಐಡಿ ಏಪ್ರಿಲ್ 20 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ನಲ್ಲಿ ಅಭ್ಯರ್ಥಿಗಳಿಗೆ ಸೂಚಿಸಿದ್ದರು.545 ಅಭ್ಯರ್ಥಿಗಳ ಪೈಕಿ ಟಾಪ್ 50 ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ ನೋಟಿಸ್ ನೀಡಲಾಗಿತ್ತು. ಈ ಪೈಕಿ ಐದಾರು ಮಂದಿ ಬಿಟ್ಟು ಮಿಕ್ಕ ಎಲ್ಲಾ ಅಭ್ಯರ್ಥಿಗಳು ವಿಚಾರಣೆಗೆ ಹಾಜರಾಗಿದ್ದರು.
ಈ ಪ್ರಕರಣದಲ್ಲಿ ಇದುವರೆಗೂ 8 ಜನರನ್ನು ಬಂಧಿಸಲಾಗಿದೆ. ಭಾನುವಾರ ಕಲಬುರಗಿಯ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಪತಿ ರಾಜೇಶ್ರನ್ನು ಬಂಧಿಸಿದ್ದು, ಅಧಿಕಾರಿಗಳು ವಾಹನ ವಶಕ್ಕೆ ಪಡೆದಿದ್ದರು. ಸೋಮವಾರ ಜ್ಞಾನ ಜ್ಯೋತಿ ಇಂಗ್ಲಿಶ್ ಮಾಧ್ಯಮ ಶಾಲೆಯ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಇನ್ನೂ ಪತ್ತೆಯಾಗಿಲ್ಲ.
ಸಿಐಡಿ ಈಗಾಗಲೇ ಅಭ್ಯರ್ಥಿಗಳಾದ ಕಲಬುರಗಿಯ ವೀರೇಶ ನಿಡಗುಂದಿ, ಅರುಣ ಪಾಟೀಲ, ರಾಯಚೂರಿನ ಪ್ರವೀಣ ಕುಮಾರ, ಚೇತನ ನಂದಗಾಂವ ಬಂಧಿಸಿದೆ. ಪರೀಕ್ಷಾ ಮೇಲ್ವಿಚಾರಣೆಗೆ ನಿಯೋಜನೆಗೊಂಡಿದ್ದ ಶಿಕ್ಷಕಿಯರಾದ ಸುಮಾ, ಸಿದ್ಧಮ್ಮ ಮತ್ತು ಸಾವಿತ್ರಿಯನ್ನು ಸಹ ಬಂಧಿಸಲಾಗಿದೆ. ಬಂಧಿತ ರಾಜೇಶ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶಿಸಿದೆ. ಸಿಐಡಿ ಹೆಚ್ಚುವರಿ ಎಸ್ಪಿ ರಾಘವೇಂದ್ರ ಹೆಗಡೆ, ಡಿವೈಎಸ್ಪಿ ಶಂಕರಗೌಡ ಪಾಟೀಲ, ಪ್ರಕಾಶ್ ರಾರೋಡ ನೇತೃತ್ವದ ತಂಡ ತನಿಖೆ ಚುರುಕುಗೊಳಿಸಿದೆ.