ಕೀವ್-ಉಕ್ರೇನ್ ಮೇಲೆ ದಾಳಿ ನಡೆಸಿದ ರಷ್ಯಾದ ವಿರುದ್ಧ ನ್ಯಾಟೋ ಪಡೆಯು ಕಿಡಿಕಾರಿದ್ದು, ಸಂಪೂರ್ಣ ಬೆಂಬಲವನ್ನು ಉಕ್ರೇನ್‌ಗೆ ನೀಡಲು ಮುಂದಾಗಿದೆ. ರಷ್ಯಾವು ಉಕ್ರೇನ್ ಮೇಲೆ ಪರಮಾಣು ದಾಳಿ ಮಾಡಿದರೆ, ಅದರಿಂದ ಉಕ್ರೇನ್ ಅನ್ನು ರಕ್ಷಣೆ ಮಾಡಲು ಅಗತ್ಯ ಕ್ರಮವನ್ನು ಕೈಗೊಳ್ಳಲು ನ್ಯಾಟೋ ಪಡೆಯು ನಿರ್ಧಾರ ಮಾಡಿದೆ. ರಷ್ಯಾ-ಉಕ್ರೇನ್ ಯುದ್ಧವು ಸುಮಾರು ಒಂದು ತಿಂಗಳಿನಿಂದ ತೀವ್ರಗೊಳ್ಳುತ್ತಿದೆ. ಈ ನಡುವೆ ಯಾವುದೇ ದಾಳಿಗಳನ್ನು ನಿಭಾಯಿಸಲು ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸಲು ನ್ಯಾಟೋ ಮಿತ್ರರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಗುರುವಾರ ಹೇಳಿದ್ದಾರೆ.
ರಷ್ಯಾ ಆಕ್ರಮಣದ ವಿರುದ್ಧ ಜಾಗತಿಕ ಹೋರಾಟಕ್ಕೆ ಝೆಲೆನ್ಸ್ಕಿ ಒತ್ತಾಯ ರಷ್ಯಾ ಆಕ್ರಮಣದ ವಿರುದ್ಧ ಜಾಗತಿಕ ಹೋರಾಟಕ್ಕೆ ಝೆಲೆನ್ಸ್ಕಿ ಒತ್ತಾಯ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಜೆನ್ಸ್ ಸ್ಟೋಲ್ಟೆನ್‌ಬರ್ಗ್, ನ್ಯಾಟೋ ರಾಸಾಯನಿಕ, ಜೈವಿಕ ಮತ್ತು ಪರಮಾಣು ರಕ್ಷಣಾ ಅಂಶಗಳನ್ನು ಸಕ್ರಿಯಗೊಳಿಸಿದೆ ಎಂದು ಹೇಳಿದರು. ಉಕ್ರೇನ್ ಮೇಲೆ ರಷ್ಯಾದ ದಾಳಿಯು ತೀವ್ರವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಜೆನ್ಸ್ ಸ್ಟೋಲ್ಟೆನ್‌ಬರ್ಗ್, “ರಷ್ಯಾವು ಉಕ್ರೇನ್ ಮೇಲೆ ಅಣು ಬಾಂಬ್ ದಾಳಿ ನಡೆಸಿದರೆ, ಅದು ಸಂಘರ್ಷದ ಸ್ವರೂಪವನ್ನು ಬದಲಾಯಿಸುತ್ತದೆ. ಇದು ಉಕ್ರೇನ್ ಮಾತ್ರವಲ್ಲದೆ ನ್ಯಾಟೋ ದೇಶಗಳ ಮೇಲೂ ಪರಿಣಾಮ ಬೀರುತ್ತದೆ,” ಎಂದು ಆತಂಕ ವ್ಯಕ್ತಪಡಿಸಿದರು. “ವಿಶ್ವದ ಇತರ ಭಾಗಗಳೊಂದಿಗೆ ಸೇರಿ ಉಕ್ರೇನ್ ವಿರುದ್ಧದ ಕ್ರೂರ ಯುದ್ಧವನ್ನು ಖಂಡಿಸಬೇಕು ಮತ್ತು ರಷ್ಯಾವನ್ನು ಆರ್ಥಿಕವಾಗಿ ಅಥವಾ ಮಿಲಿಟರಿಯಾಗಿ ಬೆಂಬಲಿಸಬಾರದು ಎಂಬುದು ಚೀನಾಕ್ಕೆ ಸಂದೇಶವಾಗಿದೆ,” ಎಂದು ಈ ಸಂದರ್ಭದಲ್ಲೇ ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಉಲ್ಲೇಖ ಮಾಡಿದ್ದಾರೆ. “ನಾವು ಒಂದು ಪೀಳಿಗೆಯಲ್ಲಿ ಅತಿದೊಡ್ಡ ಭದ್ರತಾ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ, ನಮ್ಮ ಮೈತ್ರಿಯನ್ನು ಬಲವಾಗಿ ಮತ್ತು ನಮ್ಮ ಜನರನ್ನು ಸುರಕ್ಷಿತವಾಗಿರಿಸಲು ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ,” ಎಂದು ತಿಳಿಸಿದರು.