ಬೆಂಗಳೂರು- 2010 ರಲ್ಲಿ ರಾಜ್ಯದಲ್ಲಿ ನಡೆದಿದ್ದ ‘ಆಪರೇಷನ್ ಕಮಲ’ ಪ್ರಕರಣವು ಇದೀಗ ಹಾಲಿ ಕಂದಾಯ ಸಚಿವ ಆರ್. ಅಶೋಕ್‌ಗೆ ಕಂಟಕ ಎದುರಾಗುವಂತಾಗಿದೆ. ಅಂದು ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್ ಅವರಿಗೆ 25 ಕೋಟಿ ಅಮಿಷ ಒಡ್ಡಿದ ಪ್ರಕರಣದಲ್ಲಿ ಅರ್. ಅಶೋಕ್ ಅವರ ಪಾತ್ರವಿತ್ತು ಎಂಬ ಸಂಗತಿ ಇದೀಗ ಹೊರ ಬಿದ್ದಿದೆ. ಹತ್ತು ವರ್ಷಗಳ ಹಿಂದೆ ಅನ್ಯ ಪಕ್ಷದ ಶಾಸಕರನ್ನು ಬಿಜೆಪಿ ಪಕ್ಷ ತನ್ನತ್ತ ಸೆಳೆಯಲು ಹಣ ಮತ್ತು ಅಧಿಕಾರದ ಅಮಿಷೆ ಒಡ್ಡಿತ್ತು. ಶಾಸಕರನ್ನು ಸೆಳೆಯಲು ಭಾರೀ ಪ್ರಮಾಣದ ಹಣದ ಅಮಿಷ ಒಡ್ಡಿದ್ದರು.
ಈ ಕುರಿತಂತೆ ಸಿಡಿ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಶಿವಮೊಗ್ಗ ಮೂಲದ ಗೋವಿಂದಪ್ಪ ರಮೇಶ್ ಗೌಡ ಎಂಬುವರು ಲೋಕಾಯುಕ್ತರಿಗೆ 2010ರಲ್ಲಿ ದೂರು ಸಲ್ಲಿಸಿದ್ದರು. ೧೮ನೇ ಅಪರ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದ್ದು, ದೂರುದಾರ ಗೋವಿಂದಪ್ಪ ರಮೇಶ್ ಗೌಡ ಅವರು ಏಪ್ರಿಲ್ 07 ರಂದು ಸಾಕ್ಷಿ ನುಡಿದಿದ್ದಾರೆ. 2010ರಲ್ಲಿ ಗೃಹ- ಸಾರಿಗೆ ಸಚಿವರಾಗಿದ್ದ ಆರ್. ಅಶೋಕ್‌ರವರ ಹೆಸರು ಕೇಳಿ ಬಂದಿತ್ತು.
ಬಿಜೆಪಿಯ ಆಪರೇಷನ್ ಕಮಲ ಪ್ರಕರಣದಲ್ಲಿ ಆರ್. ಅಶೋಕ್ ಅವರ ಪಾತ್ರವಿತ್ತು ಎಂಬುದಕ್ಕೆ ಗೋವಿಂದಪ್ಪ ರಮೇಶ್ ಗೌಡ ಸಾಕ್ಷ್ಯ ನುಡಿದಿದ್ದಾರೆ. ಈ ಪ್ರಕರಣದ ದೂರುದಾರನಾಗಿರುವ ಗೋವಿಂದಪ್ಪ ರಮೇಶ್ ಗೌಡ, ಪ್ರಕರಣದ ತನಿಖೆ ಸಂಬಂಧ 2016 ಜೂನ್ ನಲ್ಲಿ ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು. ಆಗಿನ ಸಚಿವ ಆರ್. ಅಶೋಕ್ ಅವರ ಮಾರ್ಗದರ್ಶನದಿಂದ ಸುರೇಶ್ ಗೌಡ ಅವರು ಗುಬ್ಬಿ ಶಾಸಕ ಶ್ರೀನಿವಾಸ್ ಅವರಿಗೆ ಅಮಿಷೆ ಒಡ್ಡಿದ್ದಾರೆ ಎಂಬುದು ಸಿಡಿ ಸಂಭಾಷಣೆಯಲ್ಲಿತ್ತು.
ಶ್ರೀನಿವಾಸ್ ಗೌಡ ಮತ್ತು ಸುರೇಶ್ ಗೌಡ ಅವರನ್ನು ನೋಡಿದರೆ ಗುರುತಿಸುತ್ತೇನೆ ಎಂದು ದೂರುದಾರ ನ್ಯಾಯಾಲಯದ ಮುಂದೆ ಸಾಕ್ಷಿ ನುಡಿದಿದ್ದಾರೆ. ನನ್ನನ್ನು ಭಾರತೀಯ ಜನತಾ ಪಕ್ಷಕ್ಕೆ ಆಹ್ವಾನಿಸಿದ್ದರು. ನನಗೆ 25 ಕೋಟಿ ರೂ. ಅಮಿಷ ಒಡ್ಡಿ ಪಕ್ಷಾಂತರ ಆಫರ್ ಕೊಟ್ಟಿದ್ದರು ಎಂದು ದೃಶ್ಯ ಮಾಧ್ಯಮದಲ್ಲಿ ಹೇಳಿದ್ದರು. 25 ಕೋಟಿ ರೂ. ಆಫರ್ ಮತ್ತು ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಒಡ್ಡಿದ್ದ ದೃಶ್ಯಗಳನ್ನು ಚಿತ್ರೀಕರಿಸಿದ್ದಾಗಿ ಶ್ರೀನಿವಾಸ್ ಹೇಳಿದ್ದರು. ಈ ದೃಶ್ಯಗಳನ್ನು ಆಧರಿಸಿ ಗೋವಿಂದಪ್ಪ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಜನರ ಮತವನ್ನು ಮಾರುವ ಮತ್ತು ಕೊಳ್ಳುವ ಪ್ರಯತ್ನ ನಡೆಸಿರುವುದನ್ನು ಮಾಧ್ಯಮದಲ್ಲಿ ಒಪ್ಪಿಕೊಂಡಿರುವುದು ಪ್ರಜಾಪ್ರಭುತ್ವದಲ್ಲಿ ಅವಮಾನವೆಸಗಿ ಮತದಾರರಿಗೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿ ಗೋವಿಂದಪ್ಪ ರಮೇಶ್‌ಗೌಡ ದೂರು ನೀಡಿದ್ದರು. ಈ ದೂರಿನ ಸಂಬಂಧ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ತನಿಖಾ ವರದಿಯನ್ನು ನ್ಯಾಯಾಲಯ ಅಂಗೀಕರಿಸಿದ್ದು, ಇದೀಗ ಆರೋಪಿತರು ಕಟೆ ಕಟೆ ಮುಂದೆ ನಿಲ್ಲುವಂತಾಗಿದೆ. ಅದರಲ್ಲೂ ಆಪರೇಷನ್ ಕಮಲ ಮಾಡುವಲ್ಲಿ ಹಾಲಿ ಕಂದಾಯ ಸಚಿವ ಆರ್. ಅಶೋಕ್ ಪಾಲ್ಗೊಂಡಿದ್ದರು ಎಂಬ ವಿಚಾರ ಇದೀಗ ಹೊರಗೆ ಬಿದ್ದಂತಾಗಿದೆ.