ಬೆಂಗಳೂರು- ಬೆಂಗಳೂರು ನಗರದಲ್ಲಿ ಸಮಗ್ರವಾಗಿ ರಾಜಕಾಲುವೆಯನ್ನು ಪುನರ್ನಿಮಾಣ ಮಾಡಲು ಐಐಎಸ್ ಸಿ ಸೇರಿದಂತೆ ಇತರೆ ವರದಿಗಳನ್ನು ಆಧರಿಸಿ ಬೆಂಗಳೂರಿನ ಒಳಚರಂಡಿ ವ್ಯವಸ್ಥೆಯನ್ನು ಸುಧಾರಣೆಗಾಗಿ ವಿಶೇಷವಾದ ಮಾಸ್ಟರ್ ಪ್ಲಾನ್ ನ್ನು ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಮಂಗಳವಾರ ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿ “ ನಮ್ಮ ಕ್ಲಿನಿಕ್” ಉದ್ಘಾಟಿಸಿದರು ಹಾಗೂ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾಕ್ಷೇತ್ರ ವ್ಯಾಪ್ತಿಯ “ಶ್ರೀ ಅಟಲ್ ಬಿಹಾರಿ ವಾಜಪೇಯಿ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆ” “ ಬಿ.ಬಿ.ಎಂ.ಪಿ ಪ್ರೌಢಶಾಲೆ ಹಾಗೂ ಕಾಲೇಜು ಕಟ್ಟಡ, ರೆಫರಲ್ ಆಸ್ಪತ್ರೆ, “ ಕರ್ನಾಟಕ ಪಬ್ಲಿಕ್ ಶಾಲೆ ಕಟ್ಟಡದ ಉದ್ಘಾಟನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣಾಗೊಳಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು
ಹೊಸ ರಸ್ತೆಗಳು, 3 ರೀತಿಯ ಚರಂಡಿ ವ್ಯವಸ್ಥೆಗಳಿಗೆ ಅನುದಾನ ನೀಡಿ, ನಿರ್ಮಿಸಿ ವಾರ್ಡ್‌ನ ನೀರು ಬೆಂಗಳೂರಿನಿಂದ ಆಚೆ ಹರಿಯುವಂತೆ ನಿರ್ವಹಿಸಲಾಗಿದೆ. ಕೆಲವು ದೊಡ್ಡ ಅಡೆತಡೆಗಳನ್ನು ನಿವಾರಿಸಲು ಹಲವು ತಾಂತ್ರಿಕ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ. ಈ ಬಾರಿ ಮಳೆಯಿಂದ ನಗರಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ 2000 ಕೋಟಿ ರೂ. ವೆಚ್ಚದಲ್ಲಿ ಹೊಸ ರಾಜಕಾಲುವೆಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಬೆಂಗಳೂರು ನಗರ ಬೆಳೆಯುತ್ತಿದೆ. ಪ್ರತಿ ದಿನ 5000 ಕ್ಕಿಂತ ಹೆಚ್ಚು ವಾಹನಗಳು ರಸ್ತೆಗಿಳಿಯುತ್ತಿವೆ. ಜನಸಂಖ್ಯೆ 1.25ಕೋಟಿ ಇದ್ದರೆ, ವಾಹನಗಳ ಸಂಖ್ಯೆ 1.6 ಕೋಟಿ ಇದೆ. ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆಯನ್ನು ನಿರ್ವಹಿಸಲು ಹೊಸ ವ್ಯವಸ್ಥೆ ರೂಪಿಸಲಾಗಿದ್ದು, ಕೇವಲ ಎರಡು ತಿಂಗಳ ಅವಧಿಯಲ್ಲಿ ಬೆಂಗಳೂರು ನಗರದ ವಾಹನ ದಟ್ಟಣೆಯಲ್ಲಿ ಸುಗಮಗೊಳಿಸಲಾಗಿದೆ. ನಗರದ ವಾಹನ ದಟ್ಟಣೆಯ ನಿವಾರಣೆಗೆ ವಿಶೇಷ ಆಯುಕ್ತರನ್ನು ನೇಮಿಸಲಾಗಿದ್ದು, ವಾಹನ ದಟ್ಟಣೆಯನ್ನು ಸಮರ್ಥವಾಗಿ ನಿರ್ವಹಿಸಲಾಗುತ್ತಿದೆ. ರಸ್ತೆಗಳು, ಪಾರ್ಕ್‌ಗಳು,ಶಾಲೆಗಳು, ಆಸ್ಪತ್ರೆಗಳು ಅಭಿವೃಧ್ಧಿಯಾಗುತ್ತಿದೆ ಎಂದರು.
ಬೆಂಗಳೂರು ಅಭಿವೃದ್ಧಿಯಿಂದ ವಂಚಿತವಾಗಿದೆ ಎನ್ನುವವರಿಗೆ ಈ ಪ್ರದೇಶವನ್ನು ತೋರಿಸಬೇಕು. ಇದೇ ರೀತಿ ಅಭಿವೃಧ್ಧಿ ಎಲ್ಲ ಪಕ್ಷದ ಶಾಸಕರ ಕ್ಷೇತ್ರಗಳಲ್ಲಿ ಸಾಧ್ಯವಾಗಿಸುವ ಮೂಲಕ ಸಮಗ್ರ ಬೆಂಗಳೂರಿನ ಅಭಿವೃದ್ಧಿಯನ್ನು ಮಾಡಲಾಗಿದೆ.50 ವರ್ಷಕ್ಕಿಂತ ಹೆಚ್ಚು ಮಳೆ ಬೆಂಗಳೂರಿಗೆ ಬಂದಿದೆ. ನಮ್ಮ ಹಿಂದಿನ ಕ್ರಮಗಳಿಂದ ಇಡೀ ಬೆಂಗಳೂರಿನ ಕೇವಲ ಎರಡು ಕ್ಷೇತ್ರದಲ್ಲಿ ಮಾತ್ರ ಪ್ರವಾಹವಾಯಿತು. ಈ ಹಿಂದೆ ಮಳೆ ಬಂದರೆ, ಎಲ್ಲ ಕ್ಷೇತ್ರಗಳ ಕೆರೆಕಟ್ಟೆಗಳು ತುಂಬಿ ಎಲ್ಲ ತಗ್ಗು ಪ್ರದೇಶಗಳಿಗೆ ನೀರು ತುಂಬುತ್ತಿತ್ತು ಎಂದರು. ಹಿಂದಿನ ಸರ್ಕಾರಗಳ ಅವಧಿಯಲ್ಲಿ ರಾಜಕಾಲುವೆಗಳ ಅತಿಕ್ರಮಣಕ್ಕೆ ಪ್ರೋತ್ಸಾಹಿಸುತ್ತಿದ್ದರು. ದೊಡ್ಡ ಕಂಪನಿಗಳಿಂದ ಕಪ್ಪುಕಾಣಿಕೆ ಪಡೆದು ರಾಜಕಾಲುವೆಯನ್ನು ಅತಿಕ್ರಮಣಗೊಳಿಸಿದ್ದು ಅವರ ಸಾಧನೆ. ಆದರೆ ಒತ್ತುವರಿಗಳನ್ನು ತೆರವುಗೊಳಿಸಿ, ಹೊಸ ರಾಜಕಾಲುವೆ ನಿರ್ಮಾಣ ಮಾಡಿ, ಬೆಂಗಳೂರಿನ ಆಚೆ ಮಳೆನೀರನ್ನು ಹರಿಯುವಂತೆ ಮಾಡಿರುವುದು ನಮ್ಮ ಸರ್ಕಾರದ ಸಾಧನೆ. ಹಿಂದಿನ ಸರ್ಕಾರದ ಅವಧಿಯಲ್ಲಿ ರಾಜಕಾಲುವೆಯನ್ನು ಸರಿಯಾಗಿ ನಿರ್ವಹಿಸಿದ್ದರೆ, ಈಗ ಪ್ರವಾಹದ ಸಮಸ್ಯೆ ಬರುತ್ತಿರಲಿಲ್ಲ ಎಂದರು.
ಇಂದು 108ನಮ್ಮ ಕ್ಲಿನಿಕ್ ಪ್ರಾರಂಭಿಸಲಾಗಿದೆ. ಜನರಿಗೆ ಆರೋಗ್ಯ ಹದಗೆಟ್ಟಾಗ ದೊಡ್ಡ ಆಸ್ಪತ್ರೆಗಳಿಗೆ ಹೋಗಲು ಸಾಮರ್ಥ್ಯವಿಲ್ಲದವರು, ಬಡಜನರಿಗೆ ಆರೋಗ್ಯ ರಕ್ಷಣೆಗಾಗಿ ನಮ್ಮ ಕ್ಲಿನಿಕ ಪ್ರಾರಂಭಿಸಲಾಗಿದೆ. ಇದು ಸ್ಪಂದನಾಶೀಲ ಸರ್ಕಾರ. ಎಲ್ಲ ವಾರ್ಡ್ ಗಳಲ್ಲಿ ನಮ್ಮ ಕ್ಲಿನಿಕ್ ಮಾಡಲಾಗುತ್ತಿದೆ. ಬರುವ ದಿನಗಳಲ್ಲಿ ಬೆಂಗಳೂರಿನಲ್ಲಿ236 ನಮ್ಮ ಕ್ಲಿನಿಕ್ ಆರಂಭಿಸಲಾಗುವುದು. ಆರೋಗ್ಯ ತಪಾಸಣೆ, ಔಷಧಿ, ಅವಶ್ಯಕ ಟೆಸ್ಟಗಳು, ಟೆಲಿಮೆಡಿಸನ್ ವ್ಯವಸ್ಥೆಗಳನ್ನು ಇಲ್ಲಿ ಮಾಡಲಾಗಿದೆ. ತಪಾಸಣೆಯ ಜೊತೆಗೆ ಆಧುನಿಕ ಚಿಕಿತ್ಸಾ ವ್ಯವಸ್ಥೆಯನ್ನು ಉಚಿತವಾಗಿ ಜನರಿಗೆ ಪೂರೈಸುವ ನಮ್ಮ ಕ್ಲಿನಿಕ್ಇ ಡೀ ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ಕಾಣಬಹುದಾಗಿದೆ ಎಂದರು.
ಬೆಂಗಳೂರಿನ ಮೆಟ್ರೋ 3ನೇ ಹಂತ
ಸಬ್ ಅರ್ಬನ್ ರೈಲು ಕಾಮಗಾರಿ ಕೆಲಸ ಪ್ರಾರಂಭವಾಗಿದೆ. ಬೆಂಗಳೂರು ಹೊರ ವಲಯದಲ್ಲಿ ಸ್ಯಾಟಿಲೈಟ್ ರಿಂಗ್ ರಸ್ತೆ ಕಾಮಗಾರಿ ಪ್ರಾರಂಭವಾಗಿದೆ. ಫೆರಿಫೆರಲ್ ರಿಂಗ್ ರಸ್ತೆಯ ನಿರ್ಮಾಣದಲ್ಲಿರುವ ತಾಂತ್ರಿಕ ಹಾಗೂ ಕಾನೂನಾತ್ಮಕ ಸಮಸ್ಯೆಯನ್ನು ಬಗೆಹರಿಸಲಾಗುತ್ತಿದ್ದು, ನಂತರ ಈ ಕಾಮಗಾರಿಯನ್ನೂ ಪ್ರಾರಂಭಿಸಲಾಗುವುದು. ಬೆಂಗಳೂರಿನ ಮೆಟ್ರೋ 3ನೇ ಹಂತಕ್ಕೆ ಸಚಿವ ಸಂಪುಟ ಅನುಮೋದನೆ ನೀಡಲಾಗಿದೆ. ಮೈಕ್ರೋ ಹಾಗೂ ಮ್ಯಾಕ್ರೋ ಹಂತದಲ್ಲಿ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ ಎಂದರು. ಜನರ ಜೀವನವನ್ನು ಅಭಿವೃದ್ಧಿಗೊಳಿಸುವ ಮಹಾಲಕ್ಷ್ಮೀ ಲೇಔಟ್‌ನ ಕಾರ್ಯಕ್ರಮಗಳು ಮಾದರಿಯಾಗಿವೆ. ಇಲ್ಲಿನ ಜನರಿಗೆ ಉತ್ತಮ ಮೂಲಸೌಕರ್ಯ, ಆರೋಗ್ಯ, ಶಿಕ್ಷಣಗಳನ್ನು ಪೂರೈಸಲು ಸಚಿವ ಗೋಪಾಲಯ್ಯನವರು ಅವಿರತ ಶ್ರಮಿಸುತ್ತಿದ್ದಾರೆ. ಇಂದು ನಮ್ಮ ಕ್ಲೀನಿಕ್, ಶಾಲೆಗಳು, ಆಸ್ಪತ್ರೆಗಳ ಲೋಕಾರ್ಪಣೆಯಾಗಿದೆ. ಅಮೃತ ನಗರೋತ್ಥಾನ ಯೋಜನೆಯಡಿ ಈ ಭಾಗಕ್ಕೆ ನೀಡಿದ ಅನುದಾನದ ಸದುಪಯೋಗವಾಗಿದೆ. ಜನರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಾರ್ಥಕತೆಯನ್ನು ಕಾಣಲಾಗುತ್ತಿದೆ. ಉತ್ತಮ ಲ್ಯಾಬ್, ಆಧುನಿಕ ಸೌಲಭ್ಯಗಳೊಂದಿಗೆ ಬಿಬಿಎಂಪಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ್ದಾಗಿದೆ ಎಂದರು.
ದೇವರು ಮೆಚ್ಚುವ ಕೆಲಸ ಮಾಡಿದ್ದಾರೆ
ಸಚಿವ ಗೋಪಾಲಯ್ಯನವರು ಕೋವಿಡ್ ಸಂದರ್ಭದಲ್ಲಿ ಮನೆಮನೆಗೂ ಸಹಾಯವನ್ನು ತಲುಪಿಸಿದ್ದಾರೆ. ಕೋವಿಡ್ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ದೇವರು ಮೆಚ್ಚುವ ಕೆಲಸವನ್ನು ಮಾಡಿದ್ದಾರೆ. ಕ್ಷೇತ್ರದ ಹಲವು ಸಮಸ್ಯೆಗಳಿಗೆ ತಮ್ಮ ಮಟ್ಟದಲ್ಲಿಯೇ ಪರಿಹಾರವನ್ನು ಕಲ್ಪಿಸುತ್ತಾರೆ. ಇಲ್ಲಿನ ಒಂದು ಶಾಲೆಯ ಶಿಕ್ಷಕರಿಗೆ ಸಂಬಳವನ್ನು ತಮ್ಮ ಟ್ರಸ್ಟ ಮೂಲಕ ಪೂರೈಸಿ, ಶಿಕ್ಷಕರ ಕೊರತೆಯನ್ನು ನೀಗಿಸಿದ್ದಾರೆ. ತಮ್ಮ ಕ್ಷೇತ್ರದ ನಮ್ಮ ಕ್ಲಿನಿಕ್ ಗಳಿಗೆ ತಮ್ಮ ಟ್ರಸ್ಟ್ ನಿಂದ ಪರೀಕ್ಷಾ ಸಲಕರಣೆಗಳನ್ನು ಒದಗಿಸಿದ್ದಾರೆ. ಜನರ ಬೇಕು ಬೇಡಗಳಿಗೆ ಸ್ಪಂದಿಸುವ ಜನೋಪಯೋಗಿ ಸಚಿವರಾಗಿದ್ದಾರೆ. ಬೆಂಗಳೂರಿನ ಅಭಿವೃದ್ಧಿ ವೇಗವನ್ನು ನೀಡಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಅಭಿವೃದ್ಧಿಗೆ ಜನರ ಬೆಂಬಲ ಇರಬೇಕು. ಮಹಾಲಕ್ಷ್ಮಿಲೇಔಟ್ ನ ಸಮಗ್ರ ಅಭಿವೃದ್ಧಿಯನ್ನು ಒಗಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ, ವಿಧಾನ ಪರಿಷತ್‌ನ ಮಾಜಿ ಸದಸ್ಯರುಗಳಾದ ನೆ.ಲ. ನರೇಂದ್ರ ಬಾಬು, ಎಂ.ಡಿ. ಲಕ್ಷ್ಮೀನಾರಾಯಣ, ಬಿಬಿಎಂಪಿ ಮಾಜಿ ಉಪ ಮಹಾಪೌರರುಗಳಾದ ಎಸ್. ಹರೀಶ್, ಹೇಮಲತಾ ಗೋಪಾಲಯ್ಯ, ಕೆ. ರಂಗಣ್ಣ, ಬಿಬಿಎಂಪಿ ಆಡಳಿತಗಾರರಾದ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ಆರೋಗ್ಯ ಇಲಾಖೆಯ ಹೆಚ್ಚುವರಿ ಆಯುಕ್ತರಾದ ತ್ರಿಲೋಕ ಚಂದ್ರ ಹಾಗೂ ಮತ್ತಿತರು ಹಾಜರಿದ್ದರು.