ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇರಳದ್ದೆಂಬ ಕಾರಣಕ್ಕೆ ತಿರಸ್ಕರಿಸಿಲ್ಲ: ಸಚಿವ ಸುನೀಲ್‍

ಬೆಂಗಳೂರು: ಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇರಳ ಕಳುಹಿಸಿದೆ ಎಂಬ ಕಾರಣಕ್ಕೆ ಕೇಂದ್ರ ತಿರಸ್ಕರಿಸಿಲ್ಲ, ಗುರುಗಳ ವಿಷಯದಲ್ಲಿ ಪ್ರಧಾನಿಯವರಿಗೆ ಮತ್ತು ಬಿಜೆಪಿಗೆ ಅತಿ ಹೆಚ್ಚು ಗೌರವವಿದೆ ಎಂದು ಸಚಿವರಾದ ಸುನೀಲ್‍ಕುಮಾರ್ ಅವರು ತಿಳಿಸಿದ್ದಾರೆ.

ಪ್ರಧಾನಿಯಾದ ಬಳಿಕ 2015ರ ಡಿಸೆಂಬರ್ 15ರಂದು ನಾರಾಯಣ ಗುರುಗಳ ಸಂಕಲ್ಪ ಕೇಂದ್ರವಾದ ಶಿವಗಿರಿಗೆ ನರೇಂದ್ರ ಮೋದಿಯವರು ಭೇಟಿ ಕೊಟ್ಟಿದ್ದರು. “ಒಂದು ಕಾಲದಲ್ಲಿ ಅಸ್ಪ್ರಶ್ಯತೆ ತಾಂಡವವಾಡುತ್ತಿದ್ದ ಕೇರಳದಲ್ಲಿ ಮೇಲು-ಕೀಳು, ಜಾತಿ- ಧರ್ಮಗಳ ತಾರತಮ್ಯದ ನೆಲೆವೀಡಾಗಿದ್ದ ನೆಲದಲ್ಲಿ, ನಾರಾಯಣಗುರುಗಳು ತಂದ ಸಾಮಾಜಿಕ ಪರಿವರ್ತನೆಯಿಂದಾಗಿ ಕೇರಳವಿಂದು ಸಮಾನತೆಯ ಸಂದೇಶ ಸಾರುವ ನಾಡಾಗಿದೆ. ನಾರಾಯಣಗುರುಗಳ ಆದರ್ಶವು ಜಗತ್ತಿಗೇ ಬೆಳಕು ನೀಡಬಲ್ಲದು” ಎಂದು ಹೇಳಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರ ಅನಾವರಣ ಮಾಡಿದ್ದರು ಎಂದು ಅವರು ನೆನಪಿಸಿದ್ದಾರೆ.

ಹಿಂದೆ ಯಾವ ಕಮ್ಯೂನಿಸ್ಟ್ ಪಾರ್ಟಿ ನಾರಾಯಣ ಗುರುಗಳ ಮೂರ್ತಿಯನ್ನು ಭಗ್ನಗೊಳಿಸಿತ್ತೋ ಅವರೇ ಈಗ ಅವರು ರಾಜಕೀಯ ಕಾರಣಕ್ಕಾಗಿ ನಾರಾಯಣ ಗುರುಗಳ ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಪೂರ್ಣ ವಿಷಯ ತಿಳಿದು ಹೇಳಿಕೆ ನೀಡಬೇಕು. ಅದನ್ನು ಬಿಟ್ಟು ಬೆಂಕಿ ಹಚ್ಚುವ ಕೆಲಸ ಮಾಡುವುದು ಸರಿಯಲ್ಲ. ರಾಜ್ಯದಲ್ಲಿರುವ ನಾರಾಯಣ ಗುರುಗಳ ಭಕ್ತರ ಮತ್ತು ಅನುಯಾಯಿಗಳಿಗೆ ತಪ್ಪು ಸಂದೇಶ ನೀಡಲಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ.

ಸುದ್ದಿಯ ಸತ್ಯಾಸತ್ಯತೆ ತಿಳಿಯುವ ಮೊದಲೇ ಇದರ ವಿರುದ್ಧ ತಪ್ಪು ಮಾಹಿತಿ ನೀಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಲು ರಕ್ಷಣಾ ಸಚಿವಾಲಯದ ಪರಿಣತರ ಸಮಿತಿ ಇದೆ. ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ತಿರಸ್ಕರಿಸಿ ಶಂಕರಾಚಾರ್ಯರ ಸ್ತಬ್ಧಚಿತ್ರವನ್ನು ಕಳುಹಿಸುವಂತೆ ಕೇಂದ್ರ ಸರ್ಕಾರ ಹೇಳಿದೆ ಎಂಬುದು ಶುದ್ಧ ಸುಳ್ಳು. ಸಿದ್ದರಾಮಯ್ಯ ಅವರು ಕೊಳಕು ರಾಜಕೀಯ ಷಡ್ಯಂತ್ರವನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.

ಕೇಂದ್ರ ಸರಕಾರವು ಶಂಕರಾಚಾರ್ಯರ ಸ್ತಬ್ಧಚಿತ್ರ ಕಳುಹಿಸಲು ಸೂಚಿಸಿದೆ ಎನ್ನುವುದು ಶುದ್ಧ ಸುಳ್ಳು. ಈ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆಕ್ಷೇಪಿಸಿದ್ದಾರೆ.

ಗಣರಾಜ್ಯೋತ್ಸವ ಪರೇಡ್‍ನಲ್ಲಿ ಭಾಗವಹಿಸುವ ಸ್ತಬ್ಧಚಿತ್ರ ಮೆರವಣಿಗೆಗೆ ಕೆಲವು ಅಲಿಖಿತ ನಿಯಮಗಳಿವೆ. ಕೇರಳ ಸರಕಾರವು ಈಗಾಗಲೇ ಒಮ್ಮೆ ಸ್ತಬ್ಧಚಿತ್ರ ನೀಡಿದೆ. ಇತರ ರಾಜ್ಯಗಳಿಗೆ ಅವಕಾಶ ನೀಡಬೇಕು. ಅಲ್ಲದೆ, ಸ್ತಬ್ಧಚಿತ್ರದ ಕೆಲವು ಮಾರ್ಗಸೂಚಿಗಳನ್ನು ಪಾಲಿಸಿಲ್ಲ. ಈ ಕಾರಣಕ್ಕೆ ಕೇರಳದ ಸ್ತಬ್ಧಚಿತ್ರ ಬೇಡ ಎಂದು ತಿಳಿಸಿದ್ದಾಗಿ ಅವರು ಹೇಳಿದ್ದಾರೆ.

Please follow and like us:

Leave a Reply

Your email address will not be published.

Next Post

ಗೋವಾ ಚುನಾವಣೆಗೂ ಸಿಎಂ ಅಭ್ಯರ್ಥಿ ಘೋಷಣೆ ಮಾಡಿದ ಆಪ್

Wed Jan 19 , 2022
ಪಣಜಿ : ಪಂಜಾಬ್ ಬೆನ್ನಲ್ಲೆ ಗೋವಾ ವಿಧಾನಸಭಾ ಚುನಾವಣೆಗೂ ಆಮ್ ಆದ್ಮಿ ಪಕ್ಷ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಿದ್ದು, ಖ್ಯಾತ ನ್ಯಾಯವಾದಿ ಅಮಿತ್ ಪಾಲೇಕರ್ ಗೋವಾ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಆಪ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ. ಮಂಗಳವಾರ ಸಂಜೆ ಗೋವಾಕ್ಕೆ ಆಗಮಿಸಿದ್ದ ಕೇಜ್ರಿವಾಲಾ ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಜತೆಗೆ ಚರ್ಚೆ ನಡೆಸಿದ್ದರು. ಎಲ್ಲ ಆಗುಹೋಗುಗಳ ಲೆಕ್ಕಾಚಾರದ […]
Wordpress Social Share Plugin powered by Ultimatelysocial