ಪಣಜಿ : ಪಂಜಾಬ್ ಬೆನ್ನಲ್ಲೆ ಗೋವಾ ವಿಧಾನಸಭಾ ಚುನಾವಣೆಗೂ ಆಮ್ ಆದ್ಮಿ ಪಕ್ಷ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಿದ್ದು, ಖ್ಯಾತ ನ್ಯಾಯವಾದಿ ಅಮಿತ್ ಪಾಲೇಕರ್ ಗೋವಾ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಆಪ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.
ಮಂಗಳವಾರ ಸಂಜೆ ಗೋವಾಕ್ಕೆ ಆಗಮಿಸಿದ್ದ ಕೇಜ್ರಿವಾಲಾ ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಜತೆಗೆ ಚರ್ಚೆ ನಡೆಸಿದ್ದರು. ಎಲ್ಲ ಆಗುಹೋಗುಗಳ ಲೆಕ್ಕಾಚಾರದ ಬಳಿಕ ಅಮಿತ್ ಪಾಲೇಕರ್ ಅವರನ್ನು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ.
ಪಂಜಾಬ್ ಚುನಾವಣೆಗೆ ಸ್ಟ್ಯಾಂಡ್ ಅಪ್ ಕಮೇಡಿಯನ್ ಭಗವಂತ್ ಮನ್ ಅವರನ್ನು ಆಯ್ಕೆ ಮಾಡಿದ ಬೆನ್ನಲ್ಲೇ ಗೋವಾಕ್ಕೂ ಸಿಎಂ ಅಭ್ಯರ್ಥಿಯನ್ನು ಆಪ್ ಘೋಷಣೆ ಮಾಡಿ ಈ ಬಾರಿ ತುಸು ಹವಾ ಎಬ್ಬಿಸಿದೆ. ದಿಲ್ಲಿ ಹಾಗೂ ಪಂಜಾಬ್ ಮಾದರಿಯಲ್ಲಿ ಇಲ್ಲೂ ತನ್ನ ಅಸ್ಥಿತ್ವ ಸಾಬೀತು ಮಾಡುವ ವಿಶ್ವಾಸವನ್ನು ಕೇಜ್ರಿವಾಲ್ ಹೊಂದಿದ್ದಾರೆ.