ಮೈಸೂರು- ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಎರಡೂ ಕಡೆ ಬಿಜೆಪಿಯದ್ದೇ ಸರ್ಕಾರವಿದೆ. ಈ ಎರಡೂ ಸರ್ಕಾರಗಳು ಮಾತನಾಡಿಕೊಂಡು ಬೇಕಂತಲೇ ಉದ್ವಿಗ್ನ ಸ್ಥಿತಿ ನಿರ್ಮಾಣ ಮಾಡುತ್ತಿರಬಹುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಗಂಭೀರ ಆರೋಪ ಮಾಡಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮಹಾಜನ್ ಆಯೋಗದ ವರದಿ ಪ್ರಕಾರ ಈಗಾಗಲೇ ಇತ್ಯರ್ಥ ಆಗಿದೆ. ಆದರೆ ಮಹಾರಾಷ್ಟ್ರದವರು ರಾಜಕೀಯ ಕಾರಣಕ್ಕಾಗಿ ಇದನ್ನು ಜೀವಂತವಾಗಿಟ್ಟುಕೊಂಡು ಕೆದಕುವ ಕೆಲಸವನ್ನು ಮಾಡುತ್ತಿದ್ದಾರೆ. ಈಗ ಅಲ್ಲಿನ ಸರ್ಕಾರ ಬೆಳಗಾವಿ ತಮಗೆ ಸೇರಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದೆ. ಇದನ್ನು ನಾವಿದ್ದಾಗಲೂ ಮನವಿ ಹಾಕಿದ್ದರು. ಆಗ ನಾವು ಈ ಮನವಿ ವಿಚಾರಣೆಗೆ ಅರ್ಹವಾದುದ್ದಲ್ಲ ಎಂದು ವಾದ ಮಂಡಿಸಿದ್ದೆವು. ಈಗ ಸರ್ಕಾರ ಒಳ್ಳೆಯ ವಕೀಲರನ್ನು ಇಟ್ಟು ವಾದ ಮಾಡಿಸುವ ಕೆಲಸ ಮಾಡಬೇಕು ಎಂದರು.
ರಾಜ್ಯದ ಬಸ್ಸುಗಳಿಗೆ ಕಲ್ಲು ಹೋಡೆದರೆ, ಪುಂಡಾಟ ಮಾಡಿದರೆ ಇಲ್ಲಿನ ಮುಖ್ಯಮಂತ್ರಿಗಳು ಪ್ರಧಾನಿಗಳ ಬಳಿ ಹೋಗಿ ಮಾತನಾಡಬೇಕು. ಮತ್ತು ಅವರಿಂದ ಇಂತಹ ಪುಂಡಾಟಗಳನ್ನು ಮಾಡದಂತೆ ಹೇಳಿಸಬೇಕು ಎಂದರು. ಮಹಾರಾಷ್ಟ್ರದಲ್ಲಿ ಯಾರ ಸರ್ಕಾರ ಇದೆ? ಇಲ್ಲಿ ಯಾರ ಸರ್ಕಾರ ಇದೆ? ಎರಡೂ ಕಡೆ ಬಿಜೆಪಿ ಸರ್ಕಾರ ಅಲ್ಲವಾ? ಇಬ್ಬರೂ ಮಾತನಾಡಿಕೊಂಡು ಉದ್ವಿಗ್ನ ಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ ಅನ್ನಿಸುತ್ತದೆ. ಮುಖ್ಯಮಂತ್ರಿಗಳು ಪ್ರಧಾನಿಗಳನ್ನು ಭೇಟಿಮಾಡಿ ಮನವರಿಕೆ ಮಾಡಿಕೊಡಬೇಕು. ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇರುವಾಗ ಅದನ್ನು ಈ ರೀತಿ ವಿವಾದ ಯಾಕೆ ಮಾಡಬೇಕು? ಅವರು ಕೋರ್ಟ್‌ನಲ್ಲಿ ಹೋರಾಟ ಮಾಡಲಿ, ನಾವು ಮಾಡೋಣ ಎಂದರು. ಕರ್ನಾಟಕದ ನೆಲ, ಜಲ, ಭಾಷೆ ಈ ವಿಚಾರದಲ್ಲಿ ಯಾವ ರಾಜಿಗೂ ಒಪ್ಪುವುದಿಲ್ಲ. ಮಹಾಜನ್ ವರದಿಯೇ ಅಂತಿಮವಾಗಿದೆ. ಹಾಗೆಯೇ ಬೆಳಗಾವಿ ನಮ್ಮದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿಯ ಒಂದೇ ಒಂದು ಇಂಚು ಜಾಗವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಎರಡೂ ಕಡೆ ಬಿಜೆಪಿ ಸರ್ಕಾರವೇ ಇರುವುದರಿಂದ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿಗಳು, ಗೃಹ ಸಚಿವರು ಮತ್ತು ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಮಹಾರಾಷ್ಟ್ರ ಸರ್ಕಾರಕ್ಕೆ ಪುಂಡಾಟಿಕೆ ಮಾಡದಂತೆ ತಿಳಿಸಬೇಕು ಎಂದು ಮನವಿ ಮಾಡಿದರು. ವಿವಾದಗಳನ್ನು ಬೆಳೆಯಲು ಬಿಟ್ಟು ರಾಜಕೀಯಕ್ಕೆ ಬಳಸುವುದು ಬಿಜೆಪಿಯ ಹುಟ್ಟುಗುಣವಾಗಿದೆ. ಸಂಧಾನದ ಮೂಲಕ ಪರಿಹರಿಸಬೇಕಿದ್ದ ಬೆಳಗಾವಿ ಗಡಿ ವಿವಾದವನ್ನು ಬೆಳೆಯಲು ಬಿಟ್ಟು ರಾಜ್ಯ ಸರ್ಕಾರ “ಚಂದಾ” ನೋಡುತ್ತಾ ಕುಳಿತುಕೊಂಡಿದೆ. ಬೆಳಗಾವಿ-ಮಹಾರಾಷ್ಟ್ರ ನಡುವಿನ ಬಸ್ ಸಂಚಾರ ಸ್ಥಗಿತಗೊಂಡಿರುವ ಕಾರಣ ಜನ ಪರದಾಡುವಂತಾಗಿದೆ. ಎರಡೂ ಕಡೆಗಳಲ್ಲಿ ಜನ ಉದ್ರಿಕ್ತರಾಗಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಶಾಂತಿ ಕಾಪಾಡುವಂತಹ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು. ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ವಿರುದ್ಧ ಅಲ್ಲಿನ ಸರ್ಕಾರ ಅತಿರೇಕದ ಕ್ರಮಗಳಿಗೆ ಮುಂದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆ ರಾಜ್ಯದ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ಮಹಾರಾಷ್ಟ್ರದ ಕನ್ನಡಿಗರಿಗೆ ಸೂಕ್ತ ರಕ್ಷಣೆ ನೀಡಬೇಕು. “ಡಬಲ್ ಇಂಜಿನ್ ಸರ್ಕಾರ” ಎಂದು ಎದೆ ಬಡಿದುಕೊಂಡರೆ ಸಾಲದು. ಆ ಅವಕಾಶವನ್ನು ಬಳಸಿಕೊಂಡು ಎರಡು ರಾಜ್ಯಗಳಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಿಕೊಳ್ಳಲು ಕೇಂದ್ರ ಸರ್ಕಾರದ ನೆರವನ್ನು ಪಡೆಯಬೇಕು ಎಂದು ಆಕ್ರೋಶ ಹೊರಹಾಕಿದರು.