ಬೆಂಗಳೂರು- ಪಂಚಮಸಾಲಿ ಸಮುದಾಯದ ಮೀಸಲಾತಿ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರಾಜ್ಯ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಿರಿಯ ಪಂಚಮಸಾಲಿ ಸ್ವಾಮೀಜಿಗಳು ಈ ವಿಚಾರದಲ್ಲಿ ’ಪಂಚಮಸಾಲಿ ಸಮುದಾಯ ಸಿಎಂ ಬೊಮ್ಮಾಯಿ ಮೇಲೆ ನಂಬಿಕೆ ಕಳೆದುಕೊಂಡಿದೆ’ ಎಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಕೋಟಾದ 2ಎ ಪ್ರವರ್ಗದಡಿ ಮೀಸಲಾತಿಗೆ ಒತ್ತಾಯಿಸಿ ಭಾರೀ ಪ್ರತಿಭಟನೆ ನಡೆಸುತ್ತಿರುವ ಪಂಚಮಸಾಲಿ ಸಮುದಾಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದೆ ಎಂದು ಪಂಚಮಸಾಲಿ ಶ್ರೀಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಚಮಸಾಲಿ ಸಮುದಾಯದ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿರುವ ಅವರು, ಕೇಂದ್ರ ಸರ್ಕಾರ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕಾಗಿದೆ ಎಂದು ಮನವಿ ಮಾಡಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ಕೂಡಲಸಂಗಮ ಮಠದ ಪೀಠಾಧಿಪತಿ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಕರ್ನಾಟಕ ಸರ್ಕಾರ ಪಂಚಮಸಾಲಿ ಸಮುದಾಯದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ ಎಂದು ದೂರಿದ್ದಾರೆ. ಪ್ರಧಾನಿ ಮೋದಿಗೆ ಬರೆದಿರುವ ನಾಲ್ಕು ಪುಟಗಳ ಪೂರ್ಣ ಪತ್ರದಲ್ಲಿ, ಸಮುದಾಯವು ಸಿಎಂ ಬಸವರಾಜ ಬೊಮ್ಮಾಯಿ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಮುಂದುವರಿದು ಮಾತನಾಡಿರುವ ಶ್ರೀಗಳು ಸುಳ್ಳು ಭರವಸೆ ನೀಡಿ ನಮ್ಮ ಪ್ರತಿಭಟನೆಯನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮೇಲೆ ನಮಗೆ ನಂಬಿಕೆ ಇಲ್ಲ. ಮುಖ್ಯಮಂತ್ರಿಗಳು ತಮ್ಮ ತಾಯಿಯ ಮೇಲೆ ಪ್ರಮಾಣ ಮಾಡಿದ ನಂತರವೂ ಈ ಭರವಸೆಯಿಂದ ಹಿಂದೆ ಸರಿದಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ನಾಲ್ಕು ಪುಟಗಳ ಪತ್ರದಲ್ಲಿ ರಾಜ್ಯದಲ್ಲಿ ಇತ್ತೀಚಿನ ಬೆಳವಣಿಗೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ತಿಳಿಸಲಾಗಿದೆ. ಬಿಜೆಪಿ ಸರ್ಕಾರ ಸಮುದಾಯವನ್ನು ನಿರ್ಲಕ್ಷಿಸಿದರೆ ಸಮುದಾಯವು ಪಕ್ಷವನ್ನು ನಿರ್ಲಕ್ಷಿಸುತ್ತದೆ ಎಂದು ಸ್ವಾಮೀಜಿ ಎಚ್ಚರಿಸಿದ್ದಾರೆ. “ಪತ್ರದಲ್ಲಿ, ನಾನು ಅವರಿಗೆ ಸಮುದಾಯದ ಭಾವನೆಗಳ ಬಗ್ಗೆ ತಿಳಿಸಿದ್ದೇನೆ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ಇದು ಬಿಜೆಪಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಸೂಚಿಸಿದ್ದೇನೆ. ಬಿಜೆಪಿಯ 80% ವೋಟ್ ಬ್ಯಾಂಕ್‌ಗಳು ಸಮುದಾಯದಿಂದ ಬಂದಿದೆ. ನಮ್ಮ ಬೇಡಿಕೆಗಳನ್ನು ಬಿಜೆಪಿ ಈಡೇರಿಸದಿದ್ದರೆ ಅದು ಬಿಜೆಪಿಯ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಎಂದು ನಾವು ಸ್ಪಷ್ಟಪಡಿಸಿದ್ದೇವೆ” ಎಂದು ಹೇಳಿದ್ದಾರೆ. ಕಳೆದ ಶುಕ್ರವಾರ ಹಾವೇರಿ ಜಿಲ್ಲೆಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಕ್ಷೇತ್ರ ಶಿಗ್ಗಾಂವಿಯಲ್ಲಿ ಪಂಚಮಸಾಲಿ ಸಮಾಜದವರು 2ಎ ವರ್ಗದಡಿ ಮೀಸಲಾತಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾಕಾರರು ಮುಖ್ಯಮಂತ್ರಿ ಪ್ರತಿಕೃತಿ ದಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದರು. ಶಿಗ್ಗಾಂವಿ ಹೊರವಲಯದಲ್ಲಿ ನೂರಾರು ಜನ ಜಮಾಯಿಸಿ ರಾಷ್ಟ್ರೀಯ ಹೆದ್ದಾರಿ-೪೮ ಅನ್ನು ಬಂದ್ ಮಾಡಿ ಸಂಚಾರಕ್ಕೆ ಅಡ್ಡಿಪಡಿಸಿದ್ದರು. ಶಿಗ್ಗಾವಿಯಲ್ಲಿ ನಡೆದ ಪ್ರತಿಭಟನೆಯ ಮುಂದುವರಿದ ಭಾಗವೇ ಬೆಂಗಳೂರಿನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಎಂದು ಜಯ ಮೃತ್ಯುಂಜಯ ಸ್ವಾಮಿ ಹೇಳಿದ್ದಾರೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ಬೆಂಗಳೂರಿನಲ್ಲಿ ಮುಷ್ಕರ ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ. ರಾಜ್ಯದ ಪ್ರಬಲ ಜಾತಿ ಸಮುದಾಯಗಳಾದ ಒಕ್ಕಲಿಗರು ಮತ್ತು ಲಿಂಗಾಯತರಿಗೆ ಪ್ರತ್ಯೇಕ (ಇತರ ಹಿಂದುಳಿದ ವರ್ಗ) ಒಬಿಸಿ ವರ್ಗವನ್ನು ರಚಿಸುವ ಮತ್ತು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಇದಾದ ಕೆಲವು ದಿನಗಳ ನಂತರ ಪಂಚಮಸಾಲಿ ಸ್ವಾಮೀಜಿಗಳು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಮುಖ್ಯ ನ್ಯಾಯಮೂರ್ತಿ ಪಿಬಿ ವರಾಳೆ ನೇತೃತ್ವದ ವಿಭಾಗೀಯ ಪೀಠವು ಈ ಮೀಸಲಾತಿಗೆ ಮಧ್ಯಂತರ ತಡೆ ನೀಡಿತು. ಒಬಿಸಿ ಮೀಸಲಾತಿ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಪ್ರಕರಣದ ವಿಚಾರಣೆ ಜನವರಿ 30ಕ್ಕೆ ನಡೆಯಲಿದೆ. 3ಎ ಮತ್ತು 3ಬಿ ವರ್ಗಗಳಲ್ಲಿರುವ ಎರಡು ಪ್ರಬಲ ಸಮುದಾಯಗಳಾದ ಒಕ್ಕಲಿಗ ಮತ್ತು ಪಂಚಮಸಾಲಿ ಸಮುದಾಯವು 2ಎ ಸ್ಥಾನಮಾನದಡಿ ಮೀಸಲಾತಿಗೆ ಆಗ್ರಹಿಸುತ್ತಿವೆ. ಪ್ರಸ್ತುತ ೩ಃಯಲ್ಲಿರುವ ಲಿಂಗಾಯತ ಪಂಚಮಸಾಲಿ ಸಮುದಾಯ ಶೇ.೧೫ರಷ್ಟು ಮೀಸಲಾತಿ ಹೊಂದಿರುವ 2ಎ ವರ್ಗಕ್ಕೆ ಸೇರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.