ಬೆಂಗಳೂರು- ಭಾರತೀಯ ಜನತಾ ಪಕ್ಷದ ವಿರುದ್ಧ ಭ್ರಷ್ಟಾಚಾರ ಮತ್ತು ಕಮೀಷನ್ ಆರೋಪ ಹೊರಿಸುತ್ತಾ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕಾಂಗ್ರೆಸ್ ಪಕ್ಷ ಎಲ್ಲಿರುತ್ತದೋ ಅಲ್ಲಿ ಭ್ರಷ್ಟಾಚಾರ ಮತ್ತು ಕಮೀಷನ್‌ಗೆ ಎಣೆಯೇ ಇಲ್ಲ. ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಕಂಡಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲುಂಡಿದೆ. 2023 ರಲ್ಲಿ ಕರ್ನಾಟಕದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹೊಸಪೇಟೆಯಲ್ಲಿ ಬಿಜೆಪಿ ಪಕ್ಷವು ಹಮ್ಮಿಕೊಂಡಿದ್ದ ಎರಡು ದಿನಗಳ ಕಾರ್ಯಕಾರಿಣಿ ಸಭೆಯ ಬಳಿಕ ಏರ್ಪಡಿಸಲಾಗಿದ್ದ ವಿಶೇಷ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಜೆ.ಪಿ. ನಡ್ಡಾ ಮಾತನಾಡುತ್ತಿದ್ದರು. ದೀರ್ಘಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷವು ಈಗ ಪ್ರಾದೇಶಿಕ ಪಕ್ಷವಾಗಿ ಉಳಿಯುವ ಸ್ಥಿತಿ ತಲುಪಿದೆ. ಜೆಡಿಎಸ್, ಶಿವಸೇನಾ, ಟಿಡಿಪಿ ಮತ್ತು ಪಿಡಿಪಿ ಮಾದರಿಯಲ್ಲಿ ಕಾಂಗ್ರೆಸ್ ಪಕ್ಷವು ಪ್ರಾದೇಶಿಕ ಪಕ್ಷವಾಗಿದೆ ಎಂದು ಅವರು ಟೀಕಿಸಿದರು.
ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ಎಂಬ ನರೇಂದ್ರ ಮೋದಿ ಕನಸು ನನಸಾಗಿಸಲು ಕರ್ನಾಟಕದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕಿದೆ,” ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಜೆ.ಪಿ. ನಡ್ಡಾ, “ಕೋವಿಡ್ ವೇಳೆ ಪ್ರಧಾನಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಮೂಲಕ ೮೦ ಕೋಟಿಗೂ ಹೆಚ್ಚು ಜನರಿಗೆ ಪಡಿತರ ಕೊಟ್ಟಿದ್ದಾರೆ. ಹಸಿವಿನಿಂದ ಯಾರೂ ಸಾಯಬಾರದೆಂಬ ಉದ್ದೇಶ ಇದರಲ್ಲಿದೆ. ಬೊಮ್ಮಾಯಿಯವರು ಮಾಸಾಶನವನ್ನು ಹೆಚ್ಚಿಸಿದ್ದಾರೆ. ಇಲ್ಲಿನ ಸಂಬಾರ ಪದಾರ್ಥಗಳು ಮತ್ತು ಕಾಫಿ ರಫ್ತು ಹೆಚ್ಚಾಗಿದೆ,” “ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರಕಾರಗಳ ಸಾಧನೆಯನ್ನು ಜನರಿಗೆ ತಲುಪಿಸಿ,” ಎಂದರು.
“ಕರ್ನಾಟಕವು ಸ್ಟಾರ್ಟ್ ಅಪ್‌ಗಳ ಪ್ರಮುಖ ಪ್ರದೇಶವಾಗಿದೆ. ಜಿಎಸ್‌ಟಿ ಸಂಗ್ರಹವೂ ಗಮನಾರ್ಹವಾಗಿ ಬೆಳೆದಿದೆ. ತೆರಿಗೆ ಸಂಗ್ರಹವೂ ಶೇ ೩೪ರಷ್ಟು ಹೆಚ್ಚಾಗಿದೆ. ಭಾರತದ ಬೆಳವಣಿಗೆ ದರವು ಶೇ ೭.೪ರಿಂದ ಶೇ ೮ಕ್ಕೂ ಹೆಚ್ಚಾಗಲಿದೆ ಎಂದು ಸರ್ವೇಗಳು ತಿಳಿಸಿವೆ ಎಂದು ತಿಳಿಸಿದರು. ಶೇ ೩೧ರಷ್ಟು ಉದ್ಯೋಗ ನೀಡಿಕೆ ಬೆಳವಣಿಗೆ ಇದೆ. ಎಲ್ಲ ಕ್ಷೇತ್ರಗಳಲ್ಲಿ ನಮ್ಮ ಬೆಳವಣಿಗೆ ಸಾಗಿದೆ,” ಎಂದು ಮೆಚ್ಚುಗೆ ಸೂಚಿಸಿದರು “ಹಂಪಿಯು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯಾಗಿ ಮಾಡಿದ್ದಕ್ಕಾಗಿ ಜನತೆಗೆ ಅಭಿನಂದನೆ ಸಲ್ಲಿಸಿದರು. ಕರ್ನಾಟಕ “ಮಿಷನ್ 150″ ಗಾಗಿ ಕಾರ್ಯಕರ್ತರು ಶ್ರಮಿಸಲಿದ್ದಾರೆ. ಉತ್ತಮ ಬೂತ್ ಮೂಲಕ ಗೆಲುವು ನಮ್ಮದಾಗಿಸಿಕೊಳ್ಳಬಹುದು. ಆದ್ದರಿಂದ ಬೂತ್, ಪೇಜ್ ಕಮಿಟಿಗೆ ಮಹತ್ವ ಕೊಡಬೇಕು. ಜನರಿಗೆ ಸೌಲಭ್ಯಗಳನ್ನು ತಲುಪಿಸಲು ಸೈನಿಕರಂತೆ ಶ್ರಮಿಸಬೇಕು,” ಎಂದು ಮನವಿ ಮಾಡಿದರು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, “ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಬಿಜೆಪಿ ೨೦೨೩ರಲ್ಲಿ ಮತ್ತೆ ಅಧಿಕಾರ ಪಡೆಯುವುದು ಅಷ್ಟೇ ಸತ್ಯ,” ಎಂದು ನುಡಿದರು. “ರಾಷ್ಟ್ರ ಮಟ್ಟದಲ್ಲಿ ನರೇಂದ್ರ ಮೋದಿಜಿ ನಾಯಕತ್ವವಿದ್ದು, ಅವರು ವಿಶ್ವಮಟ್ಟದ ನಾಯಕರಾಗಿ ಹೊರಹೊಮ್ಮಿದ್ದಾರೆ. ಇಂಥ ನಾಯಕತ್ವ ಮತ್ತು ಅಭಿವೃದ್ಧಿ ಕಾರ್ಯಗಳಿಂದ ಬಿಜೆಪಿ ಗೆಲುವು ಖಚಿತ ಎಂದು ಅಭಿಪ್ರಾಯಪಟ್ಟರು. ಬಿಜೆಪಿ ವಿಜಯಪತಾಕೆ ಹಾರಿಸಲು ವಿಜಯನಗರದಿಂದಲೇ ಸಂಕಲ್ಪ ಮಾಡಿದ್ದೇವೆ,” ಎಂದರು. “೨೦೧೩ರಿಂದ ಬಂದ ಕಾಂಗ್ರೆಸ್ ಸರಕಾರದ ಕೆಟ್ಟ ಆಡಳಿತದಿಂದ ಹಿಂಸೆ, ಕೊಲೆ, ಸುಲಿಗೆ ಹೆಚ್ಚಾಗಿತ್ತು. ಹಿಂಸೆಯ ಹಿಂದಿದ್ದ ಪಿಎಫ್‌ಐ ಮೇಲಿನ ೨೦೦ಕ್ಕೂ ಹೆಚ್ಚು ಕೇಸುಗಳನ್ನು ಸಿದ್ದರಾಮಯ್ಯ ಹಿಂಪಡೆದಿದ್ದರು. ಸಿದ್ದರಾಮಯ್ಯ ಮತಬ್ಯಾಂಕ್ ರಾಜಕೀಯ ಮಾಡಿದ್ದಾರೆ,” ಎಂದು ಟೀಕಿಸಿದರು. “ಕಾಂಗ್ರೆಸ್‌ನವರಿಗೆ ಅಧಿಕಾರ, ಮತಬ್ಯಾಂಕ್ ಮುಖ್ಯ. ಆದರೆ, ದೇಶ ಮುಖ್ಯವಲ್ಲ. ಹುಬ್ಬಳ್ಳಿ ಪೊಲೀಸ್ ಸ್ಟೇಶನ್ ಮೇಲೆ ದಾಳಿ ಆದರೆ ನಿಮ್ಮ ಧ್ವನಿಯೇ ಇಲ್ಲ. ಹಿಜಾಬ್ ವಿಚಾರವನ್ನು ಮೊಳಕೆಯಲ್ಲೇ ಚಿವುಟಬಹುದಿತ್ತು. ಆ ವಿಚಾರಕ್ಕೆ ಸಂಬಂಧಿಸಿ ನಿಮ್ಮ ಪಕ್ಷದ ವಕೀಲರು ವಾದ ಮಾಡುತ್ತಾರೆ. ಕೋರ್ಟ್ ಆದೇಶ ಪಾಲಿಸಿ ಎಂದು ಮಾತನಾಡಿಲ್ಲ ಯಾಕೆ? ಯಾವ ಕಡೆ ಹೊರಟಿದ್ದೀರಿ ನೀವು,” ಎಂದು ಪ್ರಶ್ನಿಸಿದರು. “ಪ್ರಜಾಪ್ರಭುತ್ವದ ಸಮರ ಇಲ್ಲಿಂದ ಆರಂಭವಾಗಿದೆ. ನವ ಕರ್ನಾಟಕಕ್ಕಾಗಿ ಕಾರ್ಯಕರ್ತರ ಶ್ರಮದಿಂದ ಗೆಲುವು ನಮ್ಮದಾಗಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಸಂಸದರಾದ ನಳಿನ್‌ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿಗಳಾದ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯದ ಪರಿಸರ, ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾದ ಆನಂದ್ ಸಿಂಗ್, ಕೇಂದ್ರ ಮತ್ತು ರಾಜ್ಯದ ಸಚಿವರು, ಪಕ್ಷದ ಪದಾಧಿಕಾರಿಗಳು, ಆಹ್ವಾನಿತರು ಭಾಗವಹಿಸಿದ್ದರು.