ಬೆಂಗಳೂರು- ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಕಾರ್ಯವೈಖರಿ ವಿರುದ್ಧ ಮೊದಲಿನಿಂದಲೂ ಆಕ್ರೋಷ ವ್ಯಕ್ತಪಡಿಸುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಗೃಹ ಸಚಿವರ ವಿರುದ್ಧ ’ಸುಮೋಟೋ’ ಪ್ರಕರಣ ದಾಖಲಿಸುವಂತೆ ರಾಜ್ಯ ಪೊಲೀಸರನ್ನು ಆಗ್ರಹಿಸಿದ್ದಾರೆ. ಸಮಾಜದಲ್ಲಿ ಅಶಾಂತಿ, ಜಾತಿ, ಧರ್ಮಗಳ ನಡುವೆ ವೈಷಮ್ಯ ಸೃಷ್ಟಿಗೆ ಪ್ರಚೋದಿಸುವಂತಹ ಹೇಳಿಕೆ ಕೊಟ್ಟಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ವಜಾ ಮಾಡಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಕಾನ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್ ಅವರು, ’ಪೊಲೀಸ್ ಆಯುಕ್ತರು ಗೃಹ ಸಚಿವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು ’ನಮ್ಮ ರಾಜ್ಯದ ಗೃಹ ಸಚಿವರಿಗೆ ಸಾಮಾನ್ಯ ಪ್ರಜ್ಞೆ ಎಂಬುದೇ ಇಲ್ಲವಾಗಿದೆ. ಅವರು ಗೃಹ ಸಚಿವರಾಗಿ ಆ ಸ್ಥಾನದ ಪರವಾಗಿ ಮಾತನಾಡುತ್ತಿದ್ದಾರಾ, ಸರಕಾರದ ಪರವಾಗಿ ಮಾತನಾಡುತ್ತಾರಾ ಅಥವಾ ಅವರ ಪಕ್ಷ ಬಿಜೆಪಿ ಪರ ಮಾತನಾಡುತ್ತಾರಾ ಎಂಬ ಪ್ರಶ್ನೆ ಮೂಡುತ್ತದೆ. ಅವರು ಸಮಾಜದಲ್ಲಿ ಅಶಾಂತಿ ಮೂಡಿಸಲು, ಸಾಮರಸ್ಯ ಕದಡಿಸಲು ಹಾಗೂ ಜನರನ್ನು ತಪ್ಪುದಾರಿಗೆ ಎಳೆಯಲು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಪೊಲೀಸ್ ಅಧಿಕಾರಿಗಳು ಗೃಹ ಸಚಿವರ ವಿರುದ್ದ ಪ್ರಕರಣ ದಾಖಲಿಸದಿದ್ದರೆ ಕಾಂಗ್ರೆಸ್ ನಡೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಪೊಲೀಸರು ಸುಮೋಟೋ ಕೇಸ್ ದಾಖಲಿಸಲಿಲ್ಲ ಎಂದರೆ, ನಾವೇ ಪಕ್ಷದ ವತಿಯಿಂದ ದೂರು ಸಲ್ಲಿಸುತ್ತೇವೆ. ಜನರ ಮುಂದೆ ಹೋಗುತ್ತೇವೆ’ ಎಂದರು.
ಗೃಹ ಸಚಿವರು ಈ ರೀತಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಪೊಲೀಸ್ ಅಧಿಕಾರಿಗಳನ್ನು ಎಂಜಲು ತಿನ್ನುವ ನಾಯಿಗಳು ಎಂದರು. ಮೈಸೂರು ರೇಪ್ ಪ್ರಕರಣದಲ್ಲಿ ಸಂಜೆ ನಂತರ ಆ ಯುವತಿ ಹೊರಗೆ ಯಾಕೆ ಹೋಗಬೇಕಿತ್ತು? ಎಂದರು, ನಂತರ ಕಾಂಗ್ರೆಸ್‌ನವರು ನನ್ನ ರೇಪ್ ಮಾಡುತ್ತಿದ್ದಾರೆ ಎಂದೆಲ್ಲಾ ಬೇಜವಾಬ್ದಾರಿ ಹೇಳಿಕೆ ನೀಡಿದ್ದರು. ಇವರು ವಿವೇಚನೆಯೇ ಇಲ್ಲದ ಗೃಹಸಚಿವರು. ಈ ಸಮಯದಲ್ಲಿ ನಾನು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರು ಸಮಯಕ್ಕೆ ಸರಿಯಾಗಿ, ಯಾರ ಒತ್ತಡಕ್ಕೂ ಮಣಿಯದೇ ವಾಸ್ತವ ವಿಚಾರ ತಿಳಿಸಿದರು. ತನಿಖೆ ಮಾಡುವ ಮುನ್ನವೇ ಗೃಹ ಸಚಿವರು ಈ ರೀತಿ ತೀರ್ಪು ಕೊಟ್ಟರೆ ತನಿಖೆ ಪ್ರಾಮಾಣಿಕವಾಗಿ ನಡೆಯುವುದಾದರೂ ಹೇಗೆ? ಪೊಲೀಸರು ಇವರ ಹೇಳಿಕೆ ಇಟ್ಟುಕೊಂಡು ತನಿಖೆ ಮಾಡಲು ಮುಂದಾಗುವುದಿಲ್ಲವೇ? ಗೃಹ ಸಚಿವರೇ ಹೀಗೆ ಹೇಳಿದ್ದಾರೆ, ನಾವ್ಯಾಕೆ ಬೇರೆ ರೀತಿ ಯೋಚಿಸಬೇಕು ಎಂದುಕೊಳ್ಳುವುದಿಲ್ಲವೇ? ಇದರಿಂದ ತನಿಖೆಯ ದಾರಿ ತಪ್ಪುವುದಿಲ್ಲವೇ? ಎಂದು ಡಿ.ಕೆ. ಶಿವಕುಮಾರ್ ಪ್ರಶ್ನೆಗಳ ಸುರಿಮಳೆಗರೆದರು.
ಬೆಂಗಳೂರು ಜಗಜೀವನರಾಮ್ ನಗರದ ಕೊಲೆ ಪ್ರಕರಣವನ್ನು ನಾನು ಖಂಡಿಸುತ್ತೇನೆ. ಇಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಈ ವಿಚಾರದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಆದರೆ ಕೊಲೆ ಪ್ರಕರಣ ತನಿಖೆಯಾಗುವ ಮುನ್ನವೇ ಉರ್ದು ಬರುವುದಿಲ್ಲ ಎಂದು ಹೇಳಿದ್ದಕ್ಕೇ ಆ ಯುವಕನನ್ನು ಚುಚ್ಚಿ, ಚುಚ್ಚಿ ಕೊಂದಿದ್ದಾರೆ ಎಂದು ಗೃಹ ಸಚಿವರು ಮೊದಲು ಹೇಳಿಕೆ ನೀಡಿ, ನಂತರ ತಲೆ ಕೆರೆದುಕೊಂಡು ತಮ್ಮ ಹೇಳಿಕೆ ಬದಲಾಯಿಸಿದರು. ಇನ್ನು ಇದೆಲ್ಲವೂ ಆದ ನಂತರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಹೋಗಿ ಅವರ ಕುಟುಂಬದವರಿಗೆ ಹೀಗೆ ಹೇಳಿ ಎಂದು ಹೇಳಿಕೊಡುತ್ತಾರೆ. ಇವರೆಲ್ಲರೂ ಕರ್ನಾಟಕ ರಾಜ್ಯವನ್ನು ಏನು ಮಾಡಲು ಹೊರಟಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಜತೆಗೆ ರಾಜ್ಯದಲ್ಲಿ ಕೋಮು ದ್ವೇಷ ಹಬ್ಬಿಸುವುದನ್ನು ಬಿಟ್ಟು, ಶಾಂತಿ ಕಾಪಾಡಬೇಕು. ಬೇರೆ ರಾಜ್ಯದವರು ನಮ್ಮ ರಾಜ್ಯದ ಪರಿಸ್ಥಿತಿಯ ದುರುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇಂತಹ ಸಚಿವರನ್ನು ಸರಕಾರದಲ್ಲಿ ಮುಂದುವರಿಸಲು ಮುಖ್ಯಮಂತ್ರಿಗಳಿಗೆ ಹೇಗೆ ಸಾಧ್ಯವಾಗುತ್ತಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ವಜಾಗೊಳಿಸಬೇಕಿದೆ ಎಂದರು. ನಮ್ಮ ದೇಶದ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಬೇರೆ ಯಾರಿಗೂ ಅಧಿಕಾರವಿಲ್ಲ. ನಮ್ಮ ದೇಶದ ಐಕ್ಯತೆ, ಸಮಗ್ರತೆ, ಶಾಂತಿ ವಿಚಾರದಲ್ಲಿ ಬೇರೆಯವರು ತಲೆ ಹಾಕಬೇರದು, ಇದಕ್ಕೆ ಸರ್ಕಾರ ಅವಕಾಶ ನೀಡಬಾರದು. ಈ ಸಂಘಟನೆಗಳನ್ನು ಈಗಾಗಲೇ ನಿಷೇಧಿಸಲಾಗಿದ್ದು, ಅವರ ಹೇಳಿಕೆಯನ್ನು ಖಂಡಿಸುವುದಾಗಿ ತಿಳಿಸಿದರು.
11 ರಂದು ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ: ನಿರಂತರ ಬೆಲೆ ಏರಿಕೆ ವಿಚಾರವನ್ನು ಖಂಡಿಸಿ ಇದೇ ತಿಂಗಳು 11 ರಂದು ಬೆಂಗಳೂರು ನಗರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೆಳಗ್ಗೆ 11 ಗಂಟೆಗೆ ರಾಜ್ಯ ಮಟ್ಟದ ಪ್ರತಿಭಟನೆ ಮಾಡಲು ಚಿಂತನೆ ನಡೆಸಿದ್ದೇವೆ. ಆದರೆ ಹೈಕೋರ್ಟ್ ಪ್ರತಿಭಟನೆ ಮಾಡುವಂತಿಲ್ಲ ಎಂದು ಹೇಳಿರುವ ಹಿನ್ನೆಲೆಯಲ್ಲಿ ಕಾನೂನು ಅವಕಾಶಗಳ ಬಗ್ಗೆ ಪರಿಶೀಲಿಸಲು ನಮ್ಮ ಕಾನೂನು ಘಟಕಕ್ಕೆ ಸೂಚಿಸಿರವುದಾಗಿ ಹೇಳಿದರು.