ಧಾರವಾಡ- ಕರ್ನಾಟಕದಲ್ಲೂ ಗುಜರಾತ್ ಮಾದರಿ ಚುನಾವಣೆ ಮಾಡಲು ನಮ್ಮ ಆಗ್ರಹ ಇದ್ದೇ ಇದೆ. 8 ವರ್ಷಗಳಿಂದ ನಾನು ಪ್ರಧಾನಿಗಳ ಜೊತೆ ಕೆಲಸ ಮಾಡಿದ್ದೇನೆ. ಗುಜರಾತ್ ಮಾದರಿ ಚುನಾವಣೆ ಒಳ್ಳೆಯ ಸಂಗತಿಯಾಗಿದೆ. ಕರ್ನಾಟಕದಲ್ಲೂ ಅದನ್ನೇ ಪಾಲಿಸುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಧಾರವಾಡದಲ್ಲಿ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು, ರಾಜಕೀಯವಾಗಿ ಟಿಕೆಟ್ ಕಟ್ ಮಾಡುವುದರ ಬಗ್ಗೆ ನಾನು ಈಗಲೇ ಹೇಳುವುದಿಲ್ಲ. ಯಾವಾಗ ಟಿಕೆಟ್ ಹಂಚುವ ಸಂದರ್ಭ ಬರುತ್ತದೆಯೋ ಆಗ ನೋಡೋಣ. ಇಲ್ಲಿ ಗೆಲುವು, ಪಕ್ಷ ನಿಷ್ಠೆ, ಬಿಜೆಪಿ ಆಡಳಿತಕ್ಕೆ ಬದ್ಧವಾಗಿರಬೇಕು. ನಡೆ, ನುಡಿಯಲ್ಲಿ ಸಹ ಸ್ವಚ್ಛತೆ ಇರಬೇಕು. ಗೆಲುವು ಸಾಧಿಸುವಂತಹವರಿಗೆ ಈ ಬಾರಿ ಟಿಕೆಟ್ ನೀಡಲಾಗುತ್ತದೆ ಎಂದರು. ಹಿರಿಯರಿಗೆ ಕೋಕ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹಿರಿಯರೆಲ್ಲರೂ ಕೆಟ್ಟವರು, ಹೊಸಬರು ಒಳ್ಳೆಯವರು ಎಂದರೆ ಹೇಗೆ? ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರ ಸೇವೆಯನ್ನು ನಾವು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುತ್ತೇವೆ ಎಂದರು.
ಸಲಾಂ ಆರತಿಗೆ ನಿರ್ಬಂಧ, ಜೋಶಿ ಹೇಳಿದ್ದೇನು?
ಧಾರ್ಮಿಕ ದತ್ತಿ ಇಲಾಖೆಯು ಸಲಾಂ ಆರತಿ ಬಿಟ್ಟ ವಿಚಾರಕ್ಕೆ ಮಾತನಾಡಿದ ಅವರು, ಸಲಾಂ ಆರತಿ ಎಂಬುದನ್ನು ಬಿಟ್ಟದ್ದು ಸಂತೋಷವಾಗಿದೆ. ಕನ್ನಡ ಭಾಷೆಯಲ್ಲೂ ಸಹ ನಾವು ನಮಸ್ಕಾರ ಎಂದು ಹೇಳುತ್ತೇವೆ. ಸಂಸ್ಕೃತದಲ್ಲೂ ನಮಸ್ಕಾರ ಎಂದು ಹೇಳುತ್ತಾರೆ. ಹೀಗಾಗಿ ಗುಲಾಮಿ ಸಂಸ್ಕೃತಿಯನ್ನು ಬಿಡಬೇಕು. ನಮ್ಮ ಸಂಸ್ಕೃತಿ ಇಟ್ಟುಕೊಂಡು ಮುಂದೆ ಹೋಗಬೇಕು. ಈ ಕಾರಣಕ್ಕೆ ನಾನು ಇದನ್ನು ಸ್ವಾಗತಿಸುತ್ತೇನೆ ಎಂದರು.
ಧಾರವಾಡಕ್ಕೆ ಆಗಮಿಸಲಿರುವ ಪ್ರಧಾನಿ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಐಐಟಿ ಕೇಂದ್ರದ ಕಾಮಗಾರಿಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಶನಿವಾರ ವೀಕ್ಷಣೆ ಮಾಡಿದರು. ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಪದವಿ ಪ್ರದಾನ ಸಮಾರಂಭ ಮುಗಿಸಿಕೊಂಡು ನೇರವಾಗಿ ಐಐಟಿ ಕೇಂದ್ರಕ್ಕೆ ಭೇಟಿ ನೀಡಿದ ಜೋಶಿ, ಅಲ್ಲಿನ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಅಲ್ಲದೇ ಜನವರಿ 1ರಂದು ಕಾಮಗಾರಿ ಪೂರ್ಣಗೊಳಿಸಿ ರೆಡಿ ಇಟ್ಟುಕೊಳ್ಳಬೇಕು ಎಂದು ಸೂಚನೆ ನೀಡಿದರು.
ಜನವರಿಯಲ್ಲಿ ಐಐಟಿ ಕೇಂದ್ರ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಐಟಿ ಕೇಂದ್ರದ ಉದ್ಘಾಟನೆ ಸಂಬಂಧ ಈಗಾಗಲೇ ನಾನು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತನಾಡಿದ್ದೇನೆ. ಕಟ್ಟಡ ಉದ್ಘಾಟನೆಗೆ ರೆಡಿ ಇದ್ದರೆ ಉದ್ಘಾಟನೆಗೆ ಆಗಮಿಸುವುದಾಗಿ ಪ್ರಧಾನಿಗಳು ಒಪ್ಪಿಕೊಂಡಿದ್ದಾರೆ. ಹೀಗಾಗಿ ಜನವರಿ ೧ರಂದು ಕಟ್ಟಡ ಕಾಮಗಾರಿ ಮುಗಿದಿರಬೇಕು ಎಂದು ಸೂಚನೆ ಕೊಟ್ಟಿದ್ದೇನೆ. ಜನವರಿ ಮೊದಲ ವಾರದಲ್ಲಿ ಪ್ರಧಾನಿಗಳನ್ನು ಕರೆಯಿಸುವ ವಿಚಾರದಲ್ಲಿದ್ದೇವೆ ಎಂದರು.