ಬೆಂಗಳೂರು- ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರ ಹಿತಾಸಕ್ತಿ ಸಂರಕ್ಷಣಾ (ತಿದ್ದುಪಡಿ)/ವಿಧೇಯಕ – 2022 ಅನ್ನು ಸೋಮವಾರದಂದು ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಲಾಗಿದೆ. ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರ ಹಿತಾಸಕ್ತಿ ಸಂರಕ್ಷಣಾ (ತಿದ್ದುಪಡಿ)/ವಿಧೇಯಕ – 2022 ಅನ್ನು ಕಾನೂನು ಸಚಿವ ಮಾಧುಸ್ವಾಮಿ ಸಭೆಯಲ್ಲಿ ಮಂಡನೆಯನ್ನು ಮಾಡಿದರು. ಈ ಕಾಯ್ದೆ ಅನ್ವಯ ಬ್ಯಾಂಕ್‌ಗಳಿಂದ ವಂಚನೆಗಳಾಗಿದ್ದಲ್ಲಿ ಒಂದೆ ಕಡೆ ದಾಖಲಾಗಿರುವ ಎಫ್‌ಐಆರ್ ಅನ್ನು ಒಂದೇ ಕಡೆ ತನಿಖೆಗೆ ಒಳಪಡಿಸುವುದು ಸೇರಿದಂತೆ ಪ್ರಮುಖ ಅಂಶವನ್ನು ಒಳಗೊಂಡಿದೆ ಎಂದು ಹೇಳಿದರು. ಶಾಸಕ ಯುಬಿ ವೆಂಕಟೇಶ್ ಮಾತನಾಡಿ, ”ಸೌಹಾರ್ದ ಸೊಸೈಟಿಗಳ ಮೇಲೆ ಸರ್ಕಾರ ಕಂಟ್ರೋಲ್ ಇಲ್ಲ ಅಂದಿತ್ತು. ಆದರೆ ಲೈಸೆನ್ಸ್ ಕೊಡುವ ಸರ್ಕಾರ ಕಂಟ್ರೋಲ್ ಕೂಡಾ ಇಟ್ಟುಕೊಳ್ಳಬೇಕು. ಇದನ್ನೂ ಈ ಕಾಯ್ದೆ ವ್ಯಾಪ್ತಿಗೆ ತರಬೇಕು. ಠೇವಣಿದಾರರಿಗೆ ಸ್ವಲ್ಪವಾದರೂ ವಾಪಾಸು ಕೊಡಬೇಕು. ಕಾಲಮಿತಿಯಲ್ಲಿ ತನಿಖೆ ಮುಗಿಸಬೇಕು . ಜನ ದೂರು ಕೊಡಲು ಹೋದಾಗ ಬ್ಯಾಂಕ್ ಸ್ಟೇ ತರುವುದನ್ನು ಸರ್ಕಾರ ತಡೆಯಬೇಕು” ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ವಿಧೇಯಕಯಲ್ಲಿ ಏನಿದೆ?
ಹಲವು ಸಹಕಾರಿ ಬ್ಯಾಂಕ್ ಸೇರಿದಂತೆ ವಂಚನೆಯ ವರದಿಗಳಿಂದ ಜನ ಬೇಸತ್ತಿದ್ದರು. ಇದಕ್ಕಾಗಿ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಸೇರಿ ಹಣಕಾಸು ಸಂಸ್ಥೆಗಳ ವಂಚನೆಗಳಿಂದ ಠೇವಣಿದಾರರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಈ ವಿಧೇಯಕವನ್ನು ಮಂಡಿಸಲಾಗಿದೆ. ಇದರಂತೆ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವ ಠೇವಣಿದಾರರಿಗೆ ವಂಚನೆ ಮಾಡುವ ಬ್ಯಾಂಕ್, ಸಂಸ್ಥೆಗಳ ಮುಖ್ಯಸ್ಥರು, ನಿರ್ದೇಶಕರ ವಿರುದ್ಧದ ಪ್ರಕರಣಗಳಲ್ಲಿನ ಅಪರಾಧವು ಇನ್ನು ಮುಂದೆ ಜಾಮೀನು ರಹಿತ ಎಂದು ಪರಿಗಣಿತವಾಗಿದೆ. ಒಂದೇ ಪ್ರಕರಣದಲ್ಲಿ ವಿಲೀನ ತನಿಖೆ ಈ ವಿಧೇಯಕದ ಪ್ರಕಾರ ಒಂದು ಹಣಕಾಸು ಸಂಸ್ಥೆಯ ವಿರುದ್ಧ ಹಲವು ಕಡೆ ಎಫ್‌ಐಆರ್‌ಗಳು ದಾಖಲಾಗಿದ್ದರೆ ಅದನ್ನು ಒಂದೇ ಪ್ರಕರಣವಾಗಿ ವಿಲೀನಗೊಳಿಸಲು ಈ ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಈ ಪ್ರಕರಣಗಳ ವಿರುದ್ಧ ಸಾಮಾನ್ಯ ತನಿಖೆಯನ್ನು ಕೈಗೊಳ್ಳಲು ಆದೇಶಿಸಬಹುದಾಗಿದೆ. ಇದಕ್ಕಾಗಿ ಒಬ್ಬ ಅಧಿಕಾರಿಯನ್ನು ನೇಮಕ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಬಹುದು ಎಂದು ತಿದ್ದುಪಡಿ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಅಪರಾಧವನ್ನು ಜಾಮೀನು ರಹಿತ ಎಂದು ಪರಿಗಣಿಸಲಾಗುವುದು. ಹಣಕಾಸು ಸಂಸ್ಥೆಗಳ ವಿರುದ್ಧ ಒಂದಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ ಮೊಕದ್ದಮೆ ದಾಖಲಾಗಿದ್ದರೆ, ಹೈಕೋರ್ಟ್ ಸಮ್ಮತಿಯೊಂದಿಗೆ ವಿಶೇಷ ನ್ಯಾಯಾಲಯ ಸ್ಥಾಪಿಸಬಹುಗಿದ್ದು ಈ ತಿದ್ದುಪಡಿ ವಿಧೇಯಕದ ವಿಶೇಷತೆಯಾಗಿದೆ.