ಬೆಂಗಳೂರು- ಚಿಲುಮೆ ಸಂಸ್ಥೆ ನಡೆಸಿದ ಮತದಾರರ ಮಾಹಿತಿ ಕಳವು ಆರೋಪವನ್ನು ಡೈವರ್ಟ್ ಮಾಡಲು ಬಿಜೆಪಿ ಸರ್ಕಾರ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಯಾಸ್ಟ್ ಮಾಡಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದರು. ಈ ಕುರಿತು ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಕುಕ್ಕರ್ ಬ್ಲಾಸ್ಟ್ ಮೂಲಕ ಭ್ರಷ್ಟಾಚಾರ, ಮತದಾರರ ಮಾಹಿತಿ ಕಳ್ಳತನದ ಆರೋಪವನ್ನು ಡೈವರ್ಟ್ ಮಾಡಲು ಹೊರಟಿದ್ದೀರಾ? ಭಯೋತ್ಪಾದಕ ಎಲ್ಲಿಂದ ಬಂದ? ಘಟನೆ ಆದ ಬೆನ್ನಲ್ಲೇ ಡಿಜಿಪಿ ಅವರು ಸ್ಫೋಟದ ಬಗ್ಗೆ ಟ್ವೀಟ್ ಮಾಡುತ್ತಾರೆ. ಬಿಜೆಪಿ ಸರ್ಕಾರ ದಿಕ್ಕು ತಪ್ಪಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ದ ಗಂಭೀರವಾಗಿ ಆರೋಪಿಸಿದರು ಮಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟದ ತನಿಖೆ ಮಾಡದೆ ಇದನ್ನು ಭಯೋತ್ಪಾದಕ ದಾಳಿ ಎಂದಿದ್ದಾರೆ. ಅದು ಹೇಗೆ ಸಾಧ್ಯ? ಇಲ್ಲಿ ದಿಲ್ಲಿ, ಮುಂಬೈ, ಜಮ್ಮು ಕಾಶ್ಮೀರ ಹಾಗೂ ಪುಲ್ವಾಮಾ ರೀತಿಯಲ್ಲಿ ದಾಳಿ ಆಗಿಲ್ಲ. ಆ ರೀತಿಯ ಉಗ್ರರ ದಾಳಿ ಮಂಗಳೂರಿನಲ್ಲಿ ಮಾಡಿದ್ದಾರಾ? ಎಂದು ಪ್ರಶ್ನಿಸಿದರು. ಮಂಗಳೂರಿನ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಶಾರೀಕ್ ಎಂಬಾತ ಈ ಕೃತ್ಯ ಎಸಗಿದ್ದು ಸದ್ಯ ಪೊಲೀಸರ ವಶದಲ್ಲಿದ್ದಾನೆ. ಈತ ಮಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಸ್ಫೋಟ ಮಾಡುವ ಸಂಚು ರೂಪಿಸಿದ್ದ ಎಂದು ಹೇಳಲಾಗಿತ್ತು. ಆದರೆ ಇದೀಗ ಈ ಬಾಂಬ್ ಸ್ಫೋಟ ಬಿಜೆಪಿ ಪ್ರಾಯೋಜಿತ ಎಂದು ಡಿಕೆಶಿ ಗಂಭೀರವಾದ ಆರೋಪ ಮಾಡಿದ್ದಾರೆ. ಇನ್ನೂ ಆಪರೇಷನ್ ಕಮಲ ವಿಚಾರವಾಗಿ ಮಾತನಾಡಿದ ಅವರು, ಸಂಕ್ರಾಂತಿ ಬಳಿಕ ಎಲ್ಲಾ ಗೊತ್ತಾಗುತ್ತದೆ ಎಂದು ಸೂಚ್ಯವಾಗಿ ತಿಳಿಸಿದ ಅವರು, ಗುಟ್ಟು, ಗುಟ್ಟಾಗಿಯೇ ಇರುತ್ತದೆ ಎಂದು ತಿಳಿಸಿದರು. ಸಂವಿಧಾನ ಬಿಟ್ಟು ನಾವು ಯಾರೂ ಬದುಕಲು ಸಾಧ್ಯವಿಲ್ಲ ನಾವು ಬದುಕುಗಾಗಿ ಹೋರಾಟ ಮಾಡುತ್ತಿದ್ದೇವೆ. ಬಿಜೆಪಿ ಭಾವನೆ ಮೇಲೆ ಹೋರಾಟ ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿಒಂದು ದಿನನೂ ನಿದ್ದೆ ಮಾಡಿಲ್ಲ. ಹೋರಾಟ ಮಾಡುತ್ತಿದ್ದೇನೆ. ನೂರು ಶೇ. ಸಾಧನೆ ಮಾಡಿದ್ದೇನೆ ಎಂದು ಹೇಳಲ್ಲ. ಆದರೆ ೨೫-೩೦% ಕೆಲಸ ಮಾಡಿದ್ದೇವೆ ಎಂದು ಇದೇ ಸಂದರ್ಭದಲ್ಲಿ ತಮ್ಮ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡರು. ಸಿಎಂ ಸ್ಥಾನಕ್ಕೆ ಕಾಂಗ್ರೆಸ್ ನಲ್ಲಿ ಕಿತ್ತಾಟ ನಡೆಯುತ್ತಿದೆ ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ. ಆ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂದು ಬಿಜೆಪಿಯೂ ಒಪ್ಪಿಕೊಂಡಿದೆ. ಡಬಲ್ ಇಂಜಿನ್ ಸರ್ಕಾರ, ಭಾವನೆ ಹಂಚುವ ಸರ್ಕಾರ ಎನ್ನುವ ಬಿಜೆಪಿ ಪ್ರಜಾಪ್ರಭುತ್ವದಲ್ಲಿ ಜನರ ಮುಂದೆ ಹೋಗಲು ಏಕೆ ಹೆದರುತ್ತಿದ್ದಾರೆ ಎಂಬುದು ನನ್ನ ಪ್ರಶ್ನೆ. ಜಿಲ್ಲಾ ಪಂಚಾಯತ್, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹೋಗಲು ನಿಮಗೆ ಏಕೆ ಭಯ? ಎಂದು ಪ್ರಶ್ನಿಸಿದರು.
136 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ
ನಮ್ಮ ಸರ್ವೆ ಪ್ರಕಾರ ೧೩೬ ಸ್ಥಾನದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಬಿಜೆಪಿಗೆ ೬೦-೬೫ ಬರಲಿದೆ. ಅವರಿಗೂ ಇದೆ ನಮಗೂ ಇದೆ ಸಂಕ್ರಾಂತಿ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ನನ್ನ ಹಾಗೂ ಸಿದ್ದರಾಮಯ್ಯ ನಡುವೆ ಯಾವುದೇ ಕಿತ್ತಾಟ ಇಲ್ಲ. ಬಿಜೆಪಿಯಲ್ಲೂ ನೂರಾರು ಕಿತ್ತಾಟ ಇದೆ ಎಂದು ತಿರುಗೇಟು ನೀಡಿದರು.