ಬೆಂಗಳೂರು- ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಅಧಿಕಾರ ಅವಧಿಯಲ್ಲಿ ಚಾಣಕ್ಯ ವಿವಿ ಸೆಂಟರ್ ಫಾರ್ ಎಜುಕೇಷನ್ ಅಂಡ್ ಸೋಸಿಯಲ್ ಸ್ಟಡೀಸ್ ಸಂಸ್ಥೆಗೆ ಕಾನೂನು ಬಾಹಿರವಾಗಿ ೧೧೬ ಎಕರೆ ಭೂಮಿ ಮಂಜೂರು ಮಾಡಿ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಗಂಭೀರ ಆರೋಪ ಕೇಳಿ ಬಂದಿದೆ. ’ನಾಗರಭಾವಿಯಲ್ಲಿರುವ ಚಾಣಕ್ಯ ವಿವಿ ಸೆಂಟರ್ ಫಾರ್ ಎಜುಕೇಷನ್ ಅಂಡ್ ಸೋಸಿಯಲ್ ಸ್ಟಡೀಸ್ ಸಂಸ್ಥೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮದಿಂದ 116 ಎಕರೆ ಭೂಮಿಯನ್ನು ಮಂಜೂರು ಮಾಡಿ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಖಾಸಗಿ ಸಂಸ್ಥೆಗೆ ಲಾಭ ಮಾಡಿಕೊಡಲು ಸರ್ಕಾರದ ಮಾರ್ಗಸೂಚಿ ದರಕ್ಕಿಂತಲೂ ಕಡಿಮೆ ದರ ನಿಗದಿ ಮಾಡಿ, ಸರ್ಕಾರದ ಬೊಕ್ಕಸಕ್ಕೆ 136.76ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ. ಈ ಮೂಲಕ ಖಾಸಗಿ ಸಂಸ್ಥೆಗೆ ಲಾಭ ಮಾಡಿ ಅಕ್ರಮ ಎಸಗಿದ್ದಾರೆ’, ಎಂದು ಆರೋಪಿಸಿ ಕೋಲಾರ ಮೂಲದ ಸಾಮಾಜಿಕ ಕಾರ್ಯಕರ್ತ ಕೆ.ಸಿ. ರಾಜಣ್ಣ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಿ ತನಿಖೆ ನಡೆಸುವಂತೆ ಕೋರಿದ್ದಾರೆ. ಈ ಹಿಂದೆ ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರದಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಕಿಕ್ ಬ್ಯಾಕ್ ಪಡೆದ ಆರೋಪ ಕೇಳಿ ಬಂದಾಗ ಸಿಎಂ ಹುದ್ದೆಯಿಂದ ಕೆಳಗೆ ಇಳಿದಿದ್ದರು. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗಲೇ ಲೋಕಾಯುಕ್ತ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಯಡಿಯೂರಪ್ಪ ಸಿಎಂ ಆಗಿ ಕಾರ್ಯನಿರ್ವಹಿಸುವಾಗಲೇ ಬಂಧನಕ್ಕೆ ಒಳಗಾಗಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಮತ್ತೆ ಯಡಿಯೂರಪ್ಪ ಸಿಎಂ ಆಗಿ ರಾಜ್ಯವನ್ನಾಳಿದ್ದರು. ಇದೀಗ ಮತ್ತೊಂದು ಭೂ ಹಗರಣ ಸುತ್ತಿಕೊಂಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಚನ್ನರಾಯಪಟ್ಟಣಕ್ಕೆ ಹೊಂದಿಕೊಂಡಿರುವಂತೆ ಗ್ರಾಮಗಳಲ್ಲಿ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಸ್ವಾಧೀನ ಪಡಿಸಿಕೊಂಡಿತ್ತು. ನಾಗರಭಾವಿಯಲ್ಲಿರುವ ಚಾಣಕ್ಯ ವಿವಿ ಸೆಂಟರ್ ಫಾರ್ ಎಜುಕೇಷನ್ ಅಂಡ್ ಸೋಸಿಯಲ್ ಸ್ಟಡೀಸ್ (ಚೆಸ್) ಎಂಬ ಸಂಸ್ಥೆ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ೧೩೦ ಎಕರೆ ಮಂಜೂರು ಮಾಡುವಂತೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉನ್ನತಾಧಿಕಾರ ಸಮಿತಿಗೆ ಅರ್ಜಿ ಸಲ್ಲಿಸದೇ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲಿಸಿದೆ. 2021 ಮಾರ್ಚ್ 25 ರಂದು ಮನವಿ ಸಲ್ಲಿಸಲಾಗಿತ್ತು. ಕಾನೂನು ಪ್ರಕಾರ 25 ಎಕರೆ ಮೇಲ್ಪಟ್ಟು ಜಮೀನು ಕೋರಿ ಪ್ರಸ್ತಾವನೆಯನ್ನು ಉನ್ನತಾಧಿಕಾರ ಸಮಿತಿಗೆ ಅರ್ಜಿ ಸಲ್ಲಿಸಬೇಕಿತ್ತು.
ಆದರೆ, ನೇರವಾಗಿ ಸಿಎಂ ಯಡಿಯೂರಪ್ಪ ಅವರಿಗೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಯನ್ನು ಸರ್ಕಾರದ ಮಟ್ಟದಲ್ಲಿ ಪರಿಶೀಲನೆ ಮಾಡದೇ, ಪ್ರಭಾವ ಮತ್ತು ಅಮಿಷೆಗಳಿಗೆ ಒಳಗಾಗಿ ಜಮೀನು ಮಂಜೂರು ಮಾಡುವ ಪ್ರಸ್ತಾಪವನ್ನು ಸಚಿವ ಸಂಪುಟದ ಮುಂದಿಡಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಯಡಿಯೂರಪ್ಪ ಆದೇಶ ಮಾಡಿದ್ದಾರೆ. ಮುಖ್ಯ ಕಾರ್ಯದರ್ಶಿ ಸೂಚನೆ ಮೇರೆಗೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜ್‌ಕುಮಾರ್ ಖತ್ರಿ ಅವರು ಪರಿಶೀಲನೆ ನಡೆಸಿದಾಗ, ಚಾಣಕ್ಯ ಸಂಸ್ಥೆ ಈ ಹಿಂದೆ ಸೊಸೈಟಿಯಾಗಿ ನೋಂದಣಿಯಾಗಿದ್ದು, ಆ ಬಳಿಕ ಟ್ರಸ್ಟ ಆಗಿ ಪರಿವರ್ತನೆ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ಇದರ ನಡುವೆಯೂ ಚಾಣಕ್ಯ ಸಂಸ್ಥೆಗೆ 116.16 ಎಕರೆ ಭೂಮಿಯನ್ನು ಮಂಜೂರು ಮಾಡಲು ಪ್ರತಿ ಎಕರೆಗೆ 1.61 ಕೋಟಿ ರೂ. ಮಾರ್ಗಸೂಚಿ ದರ ನಿಗದಿ ಮಾಡಿದ್ದರು. ಕೆಐಎಡಿಬಿಗೆ ಸೇರಿದ ಜಮೀನು ಮಂಜೂರು ಸಂಬಂಧ ಏಪ್ರಿಲ್ 23,2021 ರಂದು ಸಚಿವ ಸಂಪುಟದ ಮುಂದೆ ಮಂಡಿಸಿ 116 ಎಕರೆ ಜಮೀನನ್ನು ಕೇವಲ 50 ಕೋಟಿ ರೂ.ಗೆ ನಿಗದಿ ಪಡಿಸಿ ಮಂಜೂರು ಮಾಡಲಾಗಿತ್ತು. ಎಕರೆ ಮಾರ್ಗಸೂಚಿ ದರ 1.61 ಕೋಟಿ ರೂ. ಇದ್ದು, ಅದರಂತೆ 116 ಎಕರೆ ಜಮೀನಿಗೆ ಒಟ್ಟು 186 ಕೋಟಿ ರೂ.ನಿಗದಿ ಮಾಡಬೇಕಿತ್ತು.
ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಕೇವಲ 50 ಕೋಟಿ ರೂ. ನಿಗದಿ ಮಾಡಿ ಜಮೀನು ಮಂಜೂರು ಮಾಡಿ ನಿರ್ಣಯ ಕೈಗೊಂಡಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 135ಕೋಟಿ ರೂ. ನಷ್ಟವುಂಟು ಮಾಡಲಾಗಿದೆ. ಪ್ರತಿಷ್ಠಿತ ವಲ್ಲದ ಚಾಣಕ್ಯ ಟ್ರಸ್ಟ್ ಗೆ 116 ಎಕರೆ ಮಂಜೂರು ಮಾಡಿರುವ ಹಿಂದೆ ಅಕ್ರಮ ನಡೆದಿದೆ. ಇದರಿಂದ ಬಿ.ಎಸ್. ಯಡಿಯೂರಪ್ಪ ನೂರಾರು ಕೋಟಿ ಲಾಭ ಮಾಡಿಕೊಂಡಿದ್ದಾರೆ ಎಂದು ದೂರುದಾರರು ಅರೋಪಿಸಿದ್ದಾರೆ. ಬಿ.ಎಸ್.ವೈ ಕುಟುಂಬ ಈ ಪ್ರಕರಣದಲ್ಲಿ ಅಕ್ರಮ ಎಸಗಿದೆ. ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಂಡಿರುವ ಸಂಶಯ ವ್ಯಕ್ತವಾಗಿದೆ. ಈ ಕುರಿತು ತನಿಖೆ ನಡೆಸುವಂತೆ ಎಸಿಬಿಗೆ ದೂರು ಕೊಟ್ಟಿದ್ದೇನೆ. ತನಿಖೆ ಮಾಡಲಿಲ್ಲ ಎಂದಾದರೆ ನ್ಯಾಯಾಲಯದ ಮೊರೆ ನ್ಯಾಯಾಲಯದ ಮೊರೆ ಹೋಗಲು ಅರ್ಜಿದಾರರು ಸಿದ್ಧತೆ ಮಾಡಿಕೊಂಡಿದ್ದಾರೆ.