ಚಿಕ್ಕಬಳ್ಳಾಪುರ- ವಾರಾಂತ್ಯದಲ್ಲಿ ನಂದಿ ಗಿರಿಧಾಮಕ್ಕೆ ಪ್ರವಾಸಿಗರು ಭೇಟಿ ನೀಡಲು ಹಾಕಿದ್ದ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಮಾರ್ಚ್ 26ರಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹೇಳಿದೆ. ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಂದಿ ಗಿರಿಧಾಮದ ಅಭಿವೃದ್ಧಿ ಬಗ್ಗೆ ಸಭೆ ನಡೆಯಿತು. ಸಭೆಯ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಆರ್. ಲತಾ, “ಈ ವಾರಾಂತ್ಯದಿಂದಲೇ ಪ್ರವೇಶ ಪತ್ರ ಪಡೆದ ಪ್ರವಾಸಿಗರಿಗೆ ನಂದಿ ಗಿರಿಧಾಮ ಪ್ರವಾಸಕ್ಕೆ ಅನುಮತಿ ನೀಡಲಾಗಿದೆ” ಎಂದರು. ನಂದಿ ಗಿರಿಧಾಮಕ್ಕೆ ಶನಿವಾರ ಪ್ರವಾಸಕ್ಕೆ ಬರುವವರು ಶುಕ್ರವಾರ ಸಂಜೆ 6 ಗಂಟೆಯ ಒಳಗೆ ಆನ್‌ಲೈನ್ ಮೂಲಕ ಟಕೆಟ್ ಪಡೆಯಬೇಕು. ಭಾನುವಾರದ ಪ್ರವಾಸಕ್ಕೆ ಬರುವವರು ಶನಿವಾರ ಸಂಜೆ 6 ಗಂಟೆಯೊಳಗೆ ಟಕೆಟ್ ಪಡೆಯಬೇಕು. ಪ್ರತಿನಿತ್ಯ 2,500 ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಶೇ 50ರಷ್ಟು ಟಿಕೆಟ್ ಆನ್‌ಲೈನ್ ಮೂಲಕ ಮತ್ತು ಶೇ ೫೦ರಷ್ಟು ಟಿಕೆಟ್ ಆಫ್‌ಲೈನ್ ಮೂಲಕ ಮಾರಾಟ ಮಾಡಲಾಗುತ್ತದೆ.
ಆನ್‌ಲೈನ್‌ನಲ್ಲಿ ಟಿಕೆಟ್ ಸಿಗದವರು ನಂದಿ ಗಿರಿಧಾಮದ ಬಳಿ ಸಕ್ಷಮ ಪ್ರಾಧಿಕಾರ ತೆರೆದಿರುವ ಕೌಂಟರ್‌ನಲ್ಲಿ ಟಿಕೆಟ್ ಖರೀದಿ ಮಾಡಿ ಪ್ರವಾಸ ಮಾಡಬಹುದು. ಟಿಕೆಟ್ ಇದ್ದವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ನಂದಿ ಗಿರಿಧಾಮಕ್ಕೆ ಪ್ರವಾಸ ಬರುವವರು www.kstdc.co ವೆಬ್ ಸೈಟ್ ಮೂಲಕ ಟಿಕೆಟ್ ಖರೀದಿ ಮಾಡಬಹುದಾಗಿದೆ. ಟಿಕೆಟ್ ಇಲ್ಲದವರಿಗೆ ಯಾವುದೇ ಕಾರಣಕ್ಕೂ ಆಗಮಿಸಲು ಅವಕಾಶ ನೀಡುವುದಿಲ್ಲ. ಗಿರಿಧಾಮದ ಮೇಲೆ 1000 ಬೈಕ್, ಕಾರು, ಮಿನಿ ಬಸ್ ಸೇರಿದಂತೆ 300 ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅನುಮತಿ ಇದೆ. ಅಷ್ಟು ವಾಹನಗಳನ್ನು ಮಾತ್ರ ಗಿರಿಧಾಮದ ಮೇಲಕ್ಕೆ ಬಿಡಲಾಗುತ್ತದೆ. ಪ್ರಕೃತಿ ರಮಣೀಯತೆ ಮತ್ತು ಸಸ್ಯಗಳು ಹಾಗೂ ಜೀವವೈವಿಧ್ಯತೆಯ ಕಾರಣದಿಂದ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದು ವಿಶಿಷ್ಠವಾಗಿ ಗುರುತಿಸಿಕೊಂಡಿರುವ ನಂದಿಗಿರಿಧಾಮ ಜಿಲ್ಲೆಯ ಅಮೂಲ್ಯವಾದ ಆಸ್ತಿ ಮತ್ತು ಹೆಮ್ಮೆಯಾಗಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರು ಸ್ವಚ್ಛತೆ ಕಾಪಾಡುವ ಮೂಲಕ ಗಿರಿಧಾಮದ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿತ್ತು.