ಬೆಳಗಾವಿ- ನನ್ನ ಮೇಲೆ ಷಡ್ಯಂತ್ರ ಮಾಡಿ, ಷಂಡನಂತೆ ಆತ ರಾಜಕೀಯ ಮಾಡಿದ್ದಾನೆ. ಆತನನ್ನು ಪೂರ್ಣಪ್ರಮಾಣದಲ್ಲಿ ಮನೆಗೆ ಕಳುಹಿಸುವವರೆಗೂ ನಾನು ರಾಜಕೀಯ ನಿವೃತ್ತಿ ಪಡೆಯುವುದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಹಾನಾಯಕನ ವಿರುದ್ಧ ಕಿಡಿಕಾರಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ನನ್ನ ವಿರುದ್ಧ ಷಡ್ಯಂತ್ರ ನಡೆಸಿದ ಡಿ.ಕೆ ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸಬೇಕು. ಸಿಬಿಐ ಸಂಪೂರ್ಣವಾಗಿ ವಿಚಾರಣೆ ನಡೆಸಬೇಕು ಎಂದಿದ್ದಾರೆ. ಒಬ್ಬ ವ್ಯಕ್ತಿಯ ರಾಜಕೀಯ ಜೀವನವನ್ನು ಹಾಳು ಮಾಡಲು ಸಿಡಿ ಬಳಕೆ ಮಾಡಿದ ಆತ ರಾಜಕಾರಣದಲ್ಲಿ ನಾಲಾಯಕ್ ಎಂದು ವಾಗ್ದಾಳಿ ನಡೆಸಿದ್ದಾರೆ. ನನ್ನ ಬಳಿ ಹಲವು ದಾಖಲೆಗಳಿವೆ, ತನಿಖೆಗಾಗಿ ನಾನು ಸಿಬಿಐಗೆ ನೀಡುತ್ತೇನೆ ಎಂದಿದ್ದಾರೆ. 1985ರಲ್ಲಿ ನಾನು ಮತ್ತು ಡಿ.ಕೆ ಶಿವಕುಮಾರ್ ಇಬ್ಬರು ಒಟ್ಟಿಗೆ ಕಾಂಗ್ರೆಸ್‌ನಿಂದ ಚುನಾವಣೆಗೆ ಸ್ಪರ್ಧಿಸಿದೆವು, ಇಬ್ಬರು ಸೋತೆವು, ಆಗ ಆತ ಹರಿದ ಚಪ್ಪಲಿ, ಎಚ್‌ಎಂಟಿ ವಾಚ್ ಹಾಕಿದ್ದ, ಕೊರಳಲ್ಲಿ ಬೆಳ್ಳಿ ತಾಯಿತವಿತ್ತು. ಈಗ ಸಾವಿರಾರು ಕೋಟಿ ರೂಪಾಯಿ ಸಂಪಾದನೆ ಮಾಡಿ ರಾಜ್ಯವನ್ನೇ ಲೂಟಿ ಮಾಡಿ ಆಗರ್ಭ ಶ್ರೀಮಂತನಾಗಿದ್ದಾನೆ ಎಂದು ರಮೇಶ್ ಆರೋಪಿಸಿದರು. ಡಿ.ಕೆ ಶಿವಕುಮಾರ್ ತನ್ನ ಬಳಿ ಲಂಡನ್‌ನಲ್ಲಿ ಮನೆ, 10 ಸಾವಿರ ಕೋಟಿ ಆಸ್ತಿಯಿದೆ ಎಂದು ಹೇಳಿಕೊಂಡಿರುವ ಆಡಿಯೋ ನನ್ನ ಬಳಿಯಿದೆ. ನಾನು ಮತ್ತು ಡಿ.ಕೆ ಶಿವಕುಮಾರ್ ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದೆವು, ನಮ್ಮಿಬ್ಬರಿಗೂ ಒಳ್ಳೆಯ ಭವಿಷ್ಯವಿತ್ತು, ಗ್ರಾಮೀಣ ಶಾಸಕಿಯಿಂದ ನನ್ನ ಸಂಬಂಧ ಹಾಳಾಯಿತು. ಮುಂದೆ ಕಾಂಗ್ರೆಸ್ ಸರ್ವನಾಶವಾಗುವುದು ವಿಷಕನ್ಯೆಯಿಂದಲೇ ಎಂದರು ಅವರು ಹೇಳಿದರು.
ನನ್ನ ಹೆಸರು ಹಾಳುಮಾಡಲು ಮತ್ತೊಂದು ಷಡ್ಯಂತ್ರ ನಡೆಯುತ್ತಿದೆ. 2000ನೇ ಇಸವಿಯಿಂದ ರಾಜ್ಯದಲ್ಲಿ ಸಿಡಿ ಪ್ರಕರಣ ನಡೆಯುತ್ತಿದೆ. ಹಲವಾರು ರಾಜಕಾರಣಿಗಳು, ಅಧಿಕಾರಿಗಳನ್ನು ಸಿಲುಕಿಸಿದ್ದಾರೆ. ಸಿಡಿ ತೋರಿಸಿ ಬ್ಲಾಕ್‌ಮೇಲ್ ಮೂಲಕ ತಮ್ಮ ಕೆಲಸ ಮಾಡಿಕೊಂಡಿದ್ದಾರೆ. ನನ್ನನ್ನು ಟಾರ್ಗೆಟ್ ಮಾಡಿ ನನ್ನನ್ನು ಹೊಡೆದರಲ್ಲ ಡಿಕೆಶಿ. ಕಳೆದ ಒಂದೂವರೆ ವರ್ಷದಿಂದ ನಾನು ಕಾಯುತ್ತಿದ್ದೇನೆ. ರಾಜಕಾರಣ ಮಾಡಲು ಡಿ.ಕೆ.ಶಿವಕುಮಾರ್ ನಾಲಾಯಕ್. ನನ್ನ ಬಳಿ 120 ಸಾಕ್ಷ್ಯಗಳಿವೆ, ಯಾವುದನ್ನೂ ಬಿಡುಗಡೆ ಮಾಡಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಿಡಿ ತಯಾರಿಸಿ ಬ್ಯ್ಲಾಕ್‌ಮೇಲ್ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ದಯವಿಟ್ಟು ಇದನ್ನು ಸಿಬಿಐ ತನಿಖೆ ಕೊಡಬೇಕು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಒತ್ತಾಯಿಸಿದ್ದಾರೆ. ಡಿ. ಕೆ ಶಿವಕುಮಾರ್ ಸಿಡಿ ಬಿಡುಗಡೆ ಮಾಡಿ ನನ್ನ ವೈಯಕ್ತಿಕ ಜೀವನ ಹಾಳುಮಾಡಿದ. ಒಬ್ಬ ಮಹಿಳೆ ಮೂಲಕ ನನ್ನ ತೇಜೋವದೆ ಮಾಡಿದ. ಮಾರ್ಚ್ 21ರಂದು ನನ್ನ ಸಿಡಿ ಬಿಡುಗಡೆ ಮಾಡಿ ಹೆಸರು ಕೆಡಿಸಿದ. ನಾನು ಯಾವುದೇ ತಪ್ಪು ಮಾಡದಿದ್ದರೂ ಒಪ್ಪಿಕೊಳ್ಳಬೇಕಾಯಿತು. ಸಿಡಿ ಪ್ರಕರಣದ ಯುವತಿ, ನರೇಶ್ ಸೇರಿದಂತೆ 6 ಜನರನ್ನು ಬಂಧಿಸಿ. ಪ್ರಕರಣದ ತನಿಖೆ ಸಿಬಿಐಗೆ ವಹಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವೆ. ಎಲ್ಲಾ ದಾಖಲೆಗಳನ್ನು ಸಿಬಿಐಗೆ ವಹಿಸುತ್ತೇನೆ ಎಂದರು. ಸಿ.ಡಿಯಲ್ಲಿದ್ದ ಹುಡುಗಿಯನ್ನು ಬಂಧಿಸಿದರೇ ಎಲ್ಲ ಸತ್ಯ ಹೊರಬರುತ್ತದೆ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಆಕೆಯನ್ನು ಮಹಿಳಾ ಕಾಂಗ್ರೆಸ್ ಪದಾಧಿಕಾರಿಯೊಬ್ಬರ ಮನೆಯಲ್ಲಿರಿಸಿದ್ದಾರೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಗ್ರಾಮೀಣ ಶಾಸಕಿಗೆ ಟಿಕೆಟ್ ಕೊಡಲು ಶಿವಕುಮಾರ್ ನಿರಾಕರಿಸಿದ್ದ, ಆದರೆ ನಾನು ಗಲಾಟೆ ಮಾಡಿ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದೆ ಎಂದಿದ್ದಾರೆ.