ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ಕ್ಷೇತ್ರದ ಶಾಸಕ ಪಿ.ಟಿ. ಪರಮೇಶ್ವರ್ ನಾಯಕ್ ರವರ ಕರ್ತವ್ಯ ಲೋಪ ಕುರಿತು ಆಡಿರುವ ಮಾತಿಗೆ ಕೆಪಿಸಿಸಿಯ ಶಿಸ್ತುಪಾಲನಾ ಸಮಿತಿಯು ನೀಡಿದ್ದ ನೋಟಿಸ್‌ಗೆ ಕಾಂಗ್ರೆಸ್‌ನ ಹಿರಿಯ ಮುತ್ಸದ್ಧಿ ಕೆ.ಸಿ.ಕೊಂಡಯ್ಯ ಖಡಕ್ ಉತ್ತರ ನೀಡಿದ್ದಾರೆ.
ಮೂರು ಪುಟಗಳ ಸುಧೀರ್ಘ ಪತ್ರದಲ್ಲಿ ಸಮಿತಿಯ ಅಧ್ಯಕ್ಷ ರೆಹಮಾನ್ ಖಾನ್ ರವರಿಗೆ ಉತ್ತರ ನೀಡಿರುವ ಮಾಜಿ ಸಂಸದ ಕೆ.ಸಿ.ಕೊಂಡಯ್ಯರವರು ’ಹೂವಿನ ಹಡಗಲಿ ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಪರಿಹಾರಗಳನ್ನು ಒದಗಿಸದೆ ಜನರ ಬಾಯಿಗೆ ತುತ್ತಾಗಿ ಪಕ್ಷಕ್ಕೆ ಅವರಿಂದ ಕಳಂಕ ಬಂದೊದಗಿದ್ದು, ಮುಂಬರುವ ಚುನಾವಣೆಯಲ್ಲಿ ಶಾಸಕರನ್ನು ಬದಲಾಯಿಸಬೇಕೆಂಬ ಕೂಗು ಎದ್ದಿದೆ ಎಂಬ ಅಂಶಗಳನ್ನಷ್ಟೇ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು ಬಿಟ್ಟರೆ ಯಾವುದೇ ವೈಯಕ್ತಿಕ ದ್ವೇಷ ನನ್ನ ಹೇಳಿಕೆಯಲ್ಲಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸದೆ ತಮ್ಮ ಸಂಬಂಧಿಗಳಿಗೆ ಕಾಮಗಾರಿಗಳ ಗುತ್ತಿಗೆ ನೀಡುವಲ್ಲೇ ಮಗ್ನರಾಗಿದ್ದಾರೆಂದು ಹೇಳಿಕೆ ನೀಡಿದ್ದೆ. ಆದರೆ ನನ್ನ ಹೇಳಿಕೆಯಿಂದ ಪಕ್ಷದಲ್ಲಿ ಭಿನ್ನಮತ ಸ್ಪೋಟಗೊಂಡಿದೆ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಭಾವಿಸಿ, ಇದರಿಂದ ಪಕ್ಷಕ್ಕೆ ಮುಜುಗರ ತಂದೊಡ್ಡಿದೆ. ಆದ ಕಾರಣ ಹತ್ತು ದಿನಗಳಲ್ಲಿ ವಿವರಣೆಯನ್ನು ನೀಡುವಂತೆ ಫೆಬ್ರವರಿ ೨ರಂದು ಕೆಪಿಸಿಸಿ ನನಗೆ ನೋಟೀಸ್ ನೀಡಿದ್ದು, ಅದಕ್ಕೆ ಪೂರಕವಾಗಿ ಸುಧೀರ್ಘವಾಗಿ ಉತ್ತರ ನೀಡಿರುವುದಾಗಿ ಕೆ.ಸಿ.ಕೊಂಡಯ್ಯ ವಿವರಿಸಿದರು.
ಲೋಕಸಭೆ ಮತ್ತು ರಾಜ್ಯಸಭೆಗಳ ಸದಸ್ಯನಾಗಿ ಕಾರ್ಯನಿರ್ವಹಿಸಿರುವ ನನಗೆ ನೋಟೀಸ್ ನೀಡುವ ಅಧಿಕಾರ ಎಐಸಿಸಿಗೆ ಮಾತ್ರ ಇರುತ್ತದೆ. ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯ ಕ್ರಮವನ್ನು ಹೈಕಮಾಂಡ್ ಗಮನಕ್ಕೆ ತರುತ್ತೇನೆ. ಶಾಸಕರ ಕಾರ್ಯವೈಖರಿ ಕುರಿತ ಸಾರ್ವಜನಿಕರ ಅಭಿಪ್ರಾಯಗಳ ಬಗ್ಗೆ ನಾನು ಆಡಿರುವ ಮಾತುಗಳಿಗೆ ನೋಟೀಸ್ ನೀಡುವುದಾದರೆ, ಇತ್ತೀಚಿನ ಕೆಲ ದಿನಗಳಿಂದ ಕೆ.ಆರ್. ರಮೇಶ್‌ಕುಮಾರ್ ವಿರುದ್ಧ ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ಆಡಿರುವ ಮಾತುಗಳಿಗೆ ನೋಟೀಸ್ ಏಕೆ ನೀಡಿಲ್ಲ ಎಂದು ಕೆ.ಸಿ. ಕೊಂಡಯ್ಯ ಪ್ರಶ್ನಿಸಿದರು.
ನನಗೆ ನೋಟೀಸ್ ನೀಡಿರುವ ಕ್ರಮದ ಹಿಂದೆ ಯಾರಿದ್ದಾರೆಂದು ನಾನು ನೋಡುವುದಿಲ್ಲ. ನಾನೊಬ್ಬ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕಳೆದ ೪೮ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಪಕ್ಷಕ್ಕೆ ನನ್ನಿಂದ ಸಾಕಷ್ಟು ಅನುಕೂಲಗಳು ಆಗಿವೆ. ಆದರೆ ಅದ್ಯಾವುದನ್ನೂ ಪರಿಗಣಿಸದೆ ನನಗೆ ನೋಟೀಸ್ ನೀಡಿರುವುದು ನನಗೆ ತೀವ್ರ ಬೇಸರ ತಂದೊಡ್ಡಿದೆ ಎಂದು ಕೆ.ಸಿ.ಕೊಂಡಯ್ಯ ವಿಷಾಧಿಸಿದರು.